ಗ್ರೇಟರ್ ಬೆಂಗಳೂರು ವ್ಯಾಪಪ್ತಿಯಲ್ಲಿ ಇನ್ನು ಮುಂದೆ ಅನುಮತಿ ಇಲ್ಲದೇ ಯಾವುದೇ ಇಲಾಖೆ ರಸ್ತೆ ಅಗೆದರೆ ದಂಡ ವಿಧಿಸಲು ಹಾಗೂ ಪ್ರಕರಣ ದಾಖಲಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ವಿವಿಧ ಇಲಾಖೆಗಳ ಜೊತೆಗಿನ ಸಮನ್ವಯ ಸಭೆಯಲ್ಲಿ ಅವರು ಕೆಪಿಟಿಸಿಎಲ್, ಜಲಮಂಡಳಿ ಹಾಗೂ ಗೇಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ರಸ್ತೆ ಕತ್ತರಿಸುವ ಅಗತ್ಯವಿದ್ದಲ್ಲಿ “ಮಾರ್ಕ್ಸ್” ತಂತ್ರಾಂಶದ ಮೂಲಕ ಅನುಮತಿ ಪಡೆಯುವುದು ಕಡ್ಡಾಯ. ಈ ಪೈಕಿ ಯಾವುದೇ ಇಲಾಖೆಯಾಗಲಿ ಅನುಮತಿಯಿಲ್ಲದೆ ರಸ್ತೆ ಕತ್ತರಿಸುವಂತಿಲ್ಲ ಎಂದು ಅವರು ಎಚ್ಚರಿಸಿದರು.
ವಿವಿಧ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗೆಯಲು ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಅನುಮತಿ ನೀಡಬೇಕು. ಅನುಮತಿ ದೊರಕಿದ ನಂತರ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ದುರಸ್ತಿ ಕೂಡ ಪೂರೈಸಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಯಾವುದೇ ಇಲಾಖೆ ಮುಂದಿನ ದಿನಗಳಲ್ಲಿ ರಸ್ತೆ ಕತ್ತರಿಸುವ ಪೂರ್ವಭಾವಿ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಜೊತೆಗೆ, ಗೂಗಲ್ ಮ್ಯಾಪ್‌ನಲ್ಲಿ ಯಾವ ರಸ್ತೆಯಲ್ಲಿ ಎಷ್ಟು ಉದ್ದದ ರಸ್ತೆ ಕತ್ತರಿಸಲಾಗುತ್ತಿದೆ ಎಂಬುದನ್ನು ಗುರುತಿಸಿ, ಆ ಮಾಹಿತಿಯನ್ನು ಎಲ್ಲಾ ನಗರ ಪಾಲಿಕೆಗಳಿಗೆ ಒದಗಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು. ಈಗಾಗಲೇ ಎನ್‌ಕ್ಯಾಪ್ ಅನುದಾನದಡಿ ಹಲವೆಡೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಾಮಗಾರಿ ಆರಂಭಗೊಂಡಿದೆ. ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಸ್ಕೈ ವಾಕ್ ನಿರ್ಮಾಣ, ಬಸ್ ನಿಲ್ದಾಣಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ನಗರದ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ನಿರ್ವಹಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ ಪ್ರತಿಯೊಂದು ನಗರ ಪಾಲಿಕೆಗೆ ಒಂದರಂತೆ 5 ವಾಟರ್ ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಿ ಪಾದಚಾರಿ ಮಾರ್ಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ನಗರದ ಬಹುತೇಕ ಕಡೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಮತ್ತು ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಬೇಕಿದೆ. ಈ ಸಂಬಂಧ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ, ಆ ಸ್ಥಳಗಳಿಗೆ ಜಿಬಿಎ, ಸಂಚಾರಿ ಪೊಲೀಸ್ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಂತರ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ನಗರದಲ್ಲಿನ 69 ಮೆಟ್ರೋ ನಿಲ್ದಾಣಗಳ ಸಮೀಪ ಪಾರ್ಕಿಂಗ್ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮೆಟ್ರೋ ಮಾರ್ಗದಲ್ಲಿ ಅನಧಿಕೃತ ಪಾರ್ಕಿಂಗ್ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ನಗರಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಜಿಬಿಎ, ಐದು ನಗರ ಪಾಲಿಕೆಗಳು, ಮೆಟ್ರೋ, ಬಿಡಿಎ, ಡಲ್ಟ್, ಅಗ್ನಿಶಾಮಕದಳ, ಬೆಸ್ಕಾಂ, ಕೆಪಿಟಿಸಿಎಲ್, ಸಂಚಾರಿ ಪೊಲೀಸ್ ಇಲಾಖೆ, ಗೇಲ್ ಸೇರಿದಂತೆ ವಿವಿಧ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.



