ಬೆಂಗಳೂರು: ಮೊಬೈಲ್ ಗೀಳಿಗೆ ಬಿದ್ದಿದ್ದ 14 ವರ್ಷದ ಬಾಲಕನನ್ನು ಮಾವ ಕೊಲೆ ಮಾಡಿದ್ದರಿಂದ ನೊಂದ ಆ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಿವಾಸಿಗಳಾದ ಕುಟುಂಬದ ಸದಸ್ಯರು ಬಿಹಾರಕ್ಕೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಆತ್ಮಾಹತ್ಯೆ ಮಾಡಿಕೊಂಡಿದ್ದಾರೆ.
ಅಕ್ಕನ ಮಗ 14 ವರ್ಷದ ಅಮೋಘ ಕೀರ್ತಿ ಎಂಬಾತನನ್ನು ಕೊಲೆಗೈದ ಮಾವ ನಾಗಪ್ರಸಾದ್ [50], ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48), ಶ್ರುತಾ (43) ಆತ್ಮಹತ್ಯೆ ಮಾಡಿಕೊಂಡವರು. ಮೃತರು ತುಮಕೂರಿನ ಗುಬ್ಬಿ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಗಪ್ರಸಾದ್ ಸಹೋದರಿ ಶಿಲ್ಪಾ ಎಂಬಾಕೆಯ ಮಗ. ಬಾಲಕನು 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್ ನಲ್ಲಿ ಫ್ರೀ ಫೈಯರ್ ಗೇಮ್‌ಗೆ ಅಡಿಕ್ಟ್ ಆಗಿದ್ದ. ಹಣಕ್ಕಾಗಿ ಮಾವನನ್ನ ಬಳಿ ಪೀಡಿಸುತ್ತಿದ್ದ. ಇದರಿಂದ ಮನನೊಂದಿದ್ದ ನಾಗಪ್ರಸಾದ್ ಬಾಲಕನನ್ನ ಕೊಲೆ ಮಾಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದ.
ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಜೈಲಿಗಟ್ಟಿದ್ದರು. ಆ ನಂತರ ಸಹೋದರಿ ಶಿಲ್ಪಾ ಅಣ್ಣನನ್ನ ಬೇಲ್ ಮೇಲೆ ಕರೆತಂದಿದ್ದಳು. ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕೆ ಇಡೀ ಕುಟುಂಬ ಕೆಲ ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು.
ಇದೇ ವೇಳೆ ಬಿಹಾರಕ್ಕೆ ಪ್ರವಾಸ ತೆರಳಿದ್ದ ನಾಗಪ್ರಸನ್ನ ಆತನ ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48), ಶ್ರುತಾ (43) ಓವರ್ ಡೋಸ್ ಮಾತ್ರೆಗಳನ್ನು ತೆಗೆದುಕೊಂಡು ಧರ್ಮಶಾಲಾದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಮೃತರ ಬಳಿ ಸಿಕ್ಕ ಮೊಬೈಲ್ ಫೋನುಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, 1.18 ಲಕ್ಷ ನಗದು ಹಣ ಸೇರಿ ಹಲವು ದಾಖಲೆಗಳು ಹಾಗೂ ನಿದ್ರೆ ಮಾತ್ರೆಗಳನ್ನ ವಶಕ್ಕೆ ಪಡೆದಿದ್ದಾರೆ.



