ಕನ್ನಡಿಗ ಪ್ರಸಿದ್ಧ ಕೃಷ್ಣ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 38 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡನ್ನು ಸೋಲಿಸಿ ಐಪಿಎಲ್ ಪ್ಲೇಆಫ್ ರೇಸ್ ನಿಂದ ಹೊರದಬ್ಬಿದೆ.
ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಕಠಿಣ ಗುರಿ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 186 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 7 ಜಯ ಹಾಗೂ 3 ಸೋಲಿನೊಂದಿಗೆ 14 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್ ಗೆ ಸಮೀಪವಾದರೆ, ಸನ್ ರೈಸರ್ಸ್ ಹೈದರಾಬಾದ್ 10 ಪಂದ್ಯಗಳಲ್ಲಿ 3 ಜಯ ಹಾಗೂ 7 ಸೋಲಿನೊಂದಿಗೆ 6 ಅಂಕ ಸಂಪಾಸಿ 9ನೇ ಸ್ಥಾನದಲ್ಲೇ ಉಳಿದು ಟೂರ್ನಿಯಿಂದ ಹೊರಬಿದ್ದಿತು. ಎಸ್ ಆರ್ ಎಚ್ ಒಂದು ವೇಳೆ ಎಲ್ಲಾ ಪಂದ್ಯ ಗೆದ್ದರೂ ರನ್ ಸರಾಸರಿಯಲ್ಲಿ ತೀರಾ ಹಿಂದೆ ಉಳಿದಿರುವುದರಿಂದ ಪ್ಲೇಆಫ್ ಪ್ರವೇಶಿಸುವುದು ಅಸಾಧ್ಯವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಆರಂಭಿಕ ಅಭಿಷೇಕ್ ಶರ್ಮ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 74 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಪ್ರಸಿದ್ಧ ಕೃಷ್ಣ 4 ಓವರ್ ನಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು, ಮೊಹಮದ್ ಸಿರಾಜ್ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಗೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ 7 ಓವರ್ ನಲ್ಲಿ 87 ರನ್ ಜೊತೆಯಾಟದಿಂದ ಮಿಂಚಿನ ಆರಂಭ ನೀಡಿದರು. ಗಿಲ್ 38 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 76 ರನ್ ಚಚ್ಚಿದರೆ, ಸಾಯಿ 23 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 48 ರನ್ ಗಳಿಸಿದರು.
ನಂತರ ಬಂದ ಜೋಸ್ ಬಟ್ಲರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 64 ರನ್ ಚಚ್ಚಿದರೆ, ವಾಷಿಂಗ್ಟನ್ ಸುಂದರ್ 21 ರನ್ ಗಳಿಸಿದರು.



