Monday, June 29, 2026
Google search engine
Homeರಾಜ್ಯಫೆ. 13ರಂದು ಹಾವೇರಿಯಲ್ಲಿ ಬೃಹತ್‌ ಸಾಧನಾ ಸಮಾವೇಶ: ಸಚಿವ ಶಿವಾನಂದ ಪಾಟೀಲ

ಫೆ. 13ರಂದು ಹಾವೇರಿಯಲ್ಲಿ ಬೃಹತ್‌ ಸಾಧನಾ ಸಮಾವೇಶ: ಸಚಿವ ಶಿವಾನಂದ ಪಾಟೀಲ

ಹಾವೇರಿ: ರಾಜ್ಯ ಸರ್ಕಾರ ಒಂದು ಸಾವಿರ ದಿನಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ. 13ರಂದು ಬೃಹತ್‌ ಸಾಧನಾ ಸಮಾವೇಶ ಆಯೋಜನೆ ಮಾಡಲು ರಾಜ್ಯ ಸರ್ಕಾನ ನಿರ್ಧರಿಸಿದ್ದು, ಅಂದು ಹಕ್ಕು ಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮಾವೇಶ ಆಯೋಜನೆ ಮಾಡಲಿರುವ ಅಜ್ಜನ ಗುಡಿ ಪ್ರದೇಶದ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯೂ ಸೇರಿದಂತೆ ಹಲವು ಜಿಲ್ಲೆಗಳ ಫಲಾನುಭವಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಪೋಡಿ ಮುಕ್ತ ಅಭಿಯಾನ ಕೂಡಾ ನಡೆದಿದ್ದು, ಇತರ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಹಕ್ಕು ಪತ್ರ ವಿತರಣೆ ಮಾಡುವುದಾಗಿ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಭರವಸೆ ನೀಡಿದ್ದರು. ವಿಜಯನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮೊದಲ ಹಂತದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಹಾವೇರಿ ಸಮಾವೇಶದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಸುಸಜ್ಜಿತ ಮೆಡಿಕಲ್‌ ಕಾಲೇಜು ಆಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಉದ್ದೇಶದ ಯೋಜನೆಗಳು ಅನುಷ್ಠಾನ ಹಂತಕ್ಕೆ ಬಂದಿವೆ. ಹಾವೇರಿಯನ್ನು ಮಾದರಿ ಜಿಲ್ಲೆ ಮಾಡುವ ಕನಸು ಹೊಂದಿದ್ದು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಕೆಲಸ ಮಾಡುತ್ತಿದ್ದೇವೆ. ಹಾವೇರಿ ಸಮಾವೇಶವನ್ನೂ ಐತಿಹಾಸಿಕವಾಗಿ ಮಾಡಲಿದ್ದೇವೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಅನೇಕ ಮುಖಂಡರು, ಸಚಿವ ಸಂಪುಟದ ಸಹೋದ್ಯೋಗಿಗಳು ಸಮಾವೇಶದಲ್ಲಿಲ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನ ಆಗಮಿಸಲಿದ್ದು, ಎಲ್ಲಿಯೂ ಸಮಸ್ಯೆಯಾಗದಂತೆ ಕಾರ್ಯಕ್ರಮ ಆಯೋಜನೆ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ವಾಹನಗಳ ನಿಲುಗಡೆ, ಗಣ್ಯರ ವಾಹನಗಳ ನಿಲುಗಡೆ, ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ ಮಾದರಿಯಲ್ಲೇ ಸಾಧನಾ ಸಮಾವೇಶದ ಸಿದ್ದತೆ ಮಾಡಲಾಗುವುದು. ವಾಹನಗಳ ನಿಲುಗಡೆಗೆ ವೇದಿಕೆ ಸಮೀಪದಲ್ಲೇ ವ್ಯವಸ್ಥೆ ಮಾಡಲಾಗುವುದು. ವೈದ್ಯಕೀಯ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್‌ ನಿರ್ಮಿಸಿದರೆ ಸೂಕ್ತವಾಗಲಿದೆ ಎಂದು ತಿಳಿಸಿದರು.

ವಿಜಯನಗರದಲ್ಲಿ ಆಯೋಜಿಸಿದ್ದ ಸಮಾವೇಶದ ಮಾದರಿಯಲ್ಲೇ ವೇದಿಕೆಯನ್ನು ನಿರ್ಮಿಸಬೇಕು. ಗಣ್ಯರಿಗೆ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು. ಸಮಾವೇಶದಲ್ಲಿ ಭಾಗವಹಿಸುವ ಜನರಿಗೂ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವರು ನಿರ್ದೇಶನ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments