ದೀರ್ಘಾವಧಿಯ ಸಿಎಂ ಆಗಿ ದೇವರಾಜ ಅರಸು ಅವರ ದಾಖಲೆ ಮುರಿದಿರುವುದು ಕೇವಲ ಕಾಕತಾಳೀಯ ಅಷ್ಟೆ. ಜನರ ಆಶೀರ್ವಾದದಿಂದ ಈ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ನನ್ನ ಕೆಲಸ ತೃಪ್ತಿ ಇದೆ. ಜನರ ಕೆಲಸ ಮಾಡುವುದೇ ಖುಷಿಯ ವಿಚಾರ ಅಲ್ಲವೇ ಎಂದರು.
ರಾಜಕಾರಣಕ್ಕೆ ಬರುವುದೇ ಜನರು, ದಲಿತರು, ಹಿಂದುಳಿದವರ ಪರ ಕೆಲಸ ಮಾಡುವುದಕ್ಕೆ. ಈ ನಿಟ್ಟಿನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ ತೃಪ್ತಿ ಇದೆ ಎಂದರು.
ಇದೇ ವೇಳೆ ಹೈಕಮಾಂಡ್ ಪೂರ್ಣಾವಧಿ ಸಿಎಂ ಆಗಿ ಮುಂದುವರಿಸುವ ವಿಶ್ವಾಸವಿದೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು.
ದೇವರಾಜ ಅರಸು ಅವರ ದಾಖಲೆ ಮುರಿಯಬೇಕು ಎಂಬ ಗುರಿ ಇರಲಿಲ್ಲ. ಇದರ ಬಗ್ಗೆ ಮಾಹಿತಿಯೂ ಇರಲಿಲ್ಲ. ಆದರೆ ಕಾಕತಾಳೀಯವಾಗಿ ಈ ದಾಖಲೆ ಮುರಿದಿದ್ದೇನೆ. ಜನರ ಆಶೀರ್ವಾದದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ ಎಂದರು.
ದೇವರಾಜ ಅರಸು ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ. ಏಕೆಂದರೆ ಅವರ ಕಾಲಘಟ್ಟವೇ ಬೇರೆ, ನನ್ನ ಕಾಲದ ಪರಿಸ್ಥಿತಿಯೇ ಬೇರೆ. ಅವರು ಎಷ್ಟು ವರ್ಷ, ಎಷ್ಟು ದಿನ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ರಾಜ್ಯದ ಜನರಿಗಾಗಿ ಇನ್ನಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಶಾಸಕ ಆದರೆ ಸಾಕು ಅಂದುಕೊಂಡಿದ್ದೆ. ಆದರೆ ರಾಜ್ಯದ ಜನರ ಎರಡು ಬಾರಿ ಡಿಸಿಎಂ, ಎರಡು ಬಾರಿ ಸಿಎಂ ಆಗಿ ಮಾಡಿದ್ದಾರೆ. 16 ಬಾರಿ ಬಜೆಟ್ ಮಂಡಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 2789 ದಿನ ಪೂರೈಸಿದ್ದು, ಈ ಮೂಲಕ ಕರ್ನಾಟಕದ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ಸಿಎಂ ಎಂಬ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಇಂದು ಸರಿಗಟ್ಟಿದರು.
ಮುಖ್ಯಮಂತ್ರಿಗಳ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ನನಗೆ ಈ ಬಗ್ಗೆ ತಿಳಿದಿಲ್ಲ ಎಂದ ಮುಖ್ಯಮಂತ್ರಿಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ ಎಂದರು.
ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದರು.



