ಬಡವರ ಬಳಿ ಹಣ ತೆಗೆದುಕೊಳ್ಳುವ ದರಿದ್ರ ನನಗೆ ಇನ್ನೂ ಬಂದಿಲ್ಲ. ಬಡವರ ಹಳಿ ಹಣ ತೆಗೆದುಕೊಂಡರೆ ಹುಳ ಬಿದ್ದು ಸಾಯ್ತಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಯಡಿ ಬಡವರಿಗೆ ಮನೆಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದೇವೆ. ಬಡವರ ಬಳಿ ಹಣ ತಗೊಂಡು ಮನೆ ಹಂಚಬೇಕಾ? ಎಂದು ಪ್ರಶ್ನಿಸಿದರು.ಬಡವರಿಗೆ ಮನೆ ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ
ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.
ಬಡವರ ಮನೆಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಅದಕ್ಕೆ ನಮ್ಮ ಇಲಾಖೆ ಯಲ್ಲಿ ಅವಕಾಶ ಇಲ್ಲ. ಹಿರಿಯ ಶಾಸಕ ಬಿ. ಆರ್. ಪಾಟೀಲ್ ಮಾಡಿರುವ ಆರೋಪ ಸಂಬಂಧ ತನಿಖೆ ಗೆ ಆದೇಶಿಸಲಾಗುವುದು. ತನಿಖೆ ನಂತರ ಯಾರಾದರೂ ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳ ಲಾಗುವುದು. ಬಿ. ಆರ್. ಪಾಟೀಲರ ಜತೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು.
ಬಿ. ಆರ್. ಪಾಟೀಲ್ ಸಹ ಸಚಿವರು ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಅಧಿಕಾರಿಗಳ ಹೆಸರು ಸಹ ಹೇಳಿಲ್ಲ. ಪಂಚಾಯಿತಿಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಯವರಿಗೂ ಈ ವಿಚಾರದ ಬಗ್ಗೆ ಎಲ್ಲ ಮಾಹಿತಿ ತಿಳಿಸಿದ್ದೇನೆ. ನಾನು ಪ್ರವಾಸ ದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ರಾಜೀನಾಮೆ ಗೆ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ವಾಸ್ತವ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ. ಫಲಾನುಭವಿ ಆಯ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲೇ ಮನೆ ಹಂಚಿಕೆ ಮಾಡಲಾಗುವುದು. ಆಳಂದ ಕ್ಷೇತ್ರಕ್ಕೂ ಬಿ. ಆರ್. ಪಾಟೀಲ್ ಅವರ ಪತ್ರದ ಆಧಾರದಲ್ಲೇ ನೀಡಲಾಗಿದೆ. 950 ಮನೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬಡವರಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಬಡವರಿಂದ ಹಣ ಪಡೆಯುತ್ತಿಲ್ಲ. 42,300 ಮನೆಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಚನ್ನಪಟ್ಟಣದಲ್ಲಿ 5000, ರಾಮನಗರಕ್ಕೆ 3000 ಮನೆ ಮಂಜೂರು ಮಾಡಿದ್ದೇವೆ. ಬಿಆರ್ ಪಾಟೀಲರು 2000 ಮನೆಗಳನ್ನು ಕೇಳಿದ್ದಾರೆ ಎಂದು ಅವರು ಹೇಳಿದರು.
ನಾವು ಹಂತ ಹಂತವಾಗಿ ಮನೆಗಳನ್ನು ಬಡವರಿಗೆ ನೀಡಲು ಕ್ರಮ ಕೈಗೊಂಡಿದ್ದೇವೆ. ಗ್ರಾಮ ಪಂಚಾಯಿತಿ ವತಿಯಿಂದಲೇ ಮನೆಗಳು ವಿತರಣೆ ಆಗಲಿವೆ. ನಾವು ಯಾರಿಗೂ ಹಣ ವಸೂಲಿಗೆ ಟಾರ್ಗೆಟ್ ನೀಡಿಲ್ಲ. ಒಂದು ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ. ಖರ್ಚಾಗುತ್ತದೆ ಎಂದು ಅವರು ಹೇಳಿದರು.
2013-18ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 14.52 ಲಕ್ಷ ಮನೆ ಮಂಜೂರು ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ 5.8 ಲಕ್ಷ ಮನೆ ಹಂಚಿಕೆ ಆಗಿವೆ. ಎಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಕೇವಲ 690 ಮನೆಗಳನ್ನು ವಿತರಿಸಲಾಗಿದೆ ಎಂದು ಜಮೀರ್ ಅಹ್ಮದ್ ವಿವರಿಸಿದರು.



