ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಭಾರತ ಮತ್ತು ರಷ್ಯಾ ಔದ್ಯೋಗಿಕ ವಲಯದಲ್ಲಿ ಪರಸ್ಪರ ಸಹಕಾರಿ ಕುರಿತು ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
ಇದೇ ವೇಳೆ ಭಾರತಕ್ಕೆ ವಾರ್ಷಾಂತ್ಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ನೀಡುವ ವೇಳೆ ಐತಿಹಾಸಿಕ ಒಪ್ಪಂದಗಳು ನಡೆಯಲಿವೆ.
ಅಲೂಮಿನಿಯಂ, ರಸಗೊಬ್ಬರ, ರೈಲ್ವೇಸ್ ಮತ್ತು ಮೈನಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಪ್ರೋಟೋಕಾಲ್ಗೆ ಸಹಿ ಹಾಕಲಾಗಿದೆ. ಭಾರತ ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರದ ಮೇಲಿನ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದ ವೇಳೆ ಈ ಬೆಳವಣಿಗೆ ನಡೆದಿದೆ.
ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಸಹಕಾರದ ಭಾರತ-ರಷ್ಯಾ ಅಂತರಸರ್ಕಾರ ಆಯೋಗದ ಚೌಕಟ್ಟಿನ ಅಡಿಯಲ್ಲಿ ದೆಹಲಿಯ ವಾಣಿಜ್ಯ ಭವನದಲ್ಲಿ ಬುಧವಾರ ಸಭೆ ನಡೆಯಿತು. 10ನೇ ಅಧಿವೇಶನದ ಬಳಿಕ ಎರಡೂ ದೇಶಗಳ ನಡವಿನ ಸಂಬಂಧದಲ್ಲಿ ಎಷ್ಟು ವೃದ್ಧಿಯಾಗಿದೆ ಎಂಬುದನ್ನು ಈ ಸಭೆಯಲ್ಲಿ ಅವಲೋಕಿಸಲಾಯಿತು.
ಡಿಪಿಐಐಟಿ ಇಲಾಖೆಯ ಕಾರ್ಯದರ್ಶಿಯಾದ ಅಮರ್ದೀಪ್ ಸಿಂಗ್ ಭಾಟಿಯಾ, ರಷ್ಯನ್ ಉಪ ಸಚಿವ ಅಲೆಕ್ಸೇ ಗ್ರುಜ್ಡೆವ್ ಅವರು ಈ 11ನೇ ಸೆಷನ್ನ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಹೆಚ್ಚು ಗಮನ ಕೊಡಲಾಗಿದೆ.
ಸಣ್ಣ ವಿಮಾನ ಪಿಸ್ಟನ್ ಎಂಜಿನ್ಗಳ ತಯಾರಿಕೆ, ಕಾರ್ಬನ್ ಫೈಬರ್ ಟೆಕ್ನಾಲಜಿಯ ಜಂಟಿ ಅಭಿವೃದ್ಧಿ, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, 3ಡಿ ಪ್ರಿಂಟಿಂಗ್ ಇತ್ಯಾದಿ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರೇರ್ ಅರ್ತ್ ಮತ್ತು ಪ್ರಮುಖ ಖನಿಜಗಳನ್ನು ಹೊರತೆಗೆಯುವುದು, ಅಂಡರ್ಗ್ರೌಂಡ್ ಕೋಲ್ ಕ್ಯಾಸಿಫಿಕೇಶನ್, ಆಧುನಿಕ ಕೈಗಾರಿಕಾ ಇನ್ಫ್ರಾಸ್ಟ್ರಕ್ಚರ್ ಸ್ಥಾಪಿಸುವುದು ಇತ್ಯಾದಿ ಸಾಧ್ಯತೆಯನ್ನು ಅವಲೋಕಿಸಲಾಗಿದೆ.
ಅಲೂಮಿನಿಯಂ, ರಸಗೊಬ್ಬರ, ರೈಲ್ವೆ ಸಾರಿಗೆಯಲ್ಲಿ ಸಹಕಾರ ಹೆಚ್ಚಿಸುವುದು; ಮೈನಿಂಗ್ ಸೆಕ್ಟರ್ ಉಪಕರಣದಲ್ಲಿ ಕೆಪಾಸಿಟಿ ನಿರ್ಮಾಣ, ಟೆಕ್ನಾಲಜಿ ರವಾನೆ, ಅನ್ವೇಷಣೆ ಹಾಗೂ ಕೈಗಾರಿಕೆ ಮತ್ತು ಗೃಹ ತ್ಯಾಜ್ಯ ನಿರ್ವಹಣೆ ಸಂಬಂಧ ಎರಡೂ ದೇಶಗಳ ನಡುವಿನ ಸಹಕಾರ ಹೆಚ್ಚಿಸುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ.
ಮಿಲಿಟರಿ ಸಂಬಂಧ ಮತ್ತಷ್ಟು ಗಟ್ಟಿ
ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಪ್ರಬಲ ಅಂಶವಾಗಿರುವ ಡಿಫೆನ್ಸ್ ಸೆಕ್ಟರ್ನಲ್ಲೂ ಸಹಕಾರ ಗಟ್ಟಿಗೊಳಿಸಲು ಮಾತುಕತೆಯಾಗಿದೆ. ಭಾರತದಲ್ಲಿರುವ ಹೆಚ್ಚಿನ ಶಸ್ತ್ರಾಸ್ತ್ರಗಳು ರಷ್ಯನ್ ನಿರ್ಮಿತವಾದವಾಗಿವೆ. ಭಾರತದಲ್ಲೇ ತಯಾರಿಸಲಾಗವ ಬ್ರಹ್ಮೋಸ್ ಕ್ಷಿಪಣಿಯು ರಷ್ಯಾ ಮೂಲದ್ದಾಗಿದೆ.



