ಬೀದಿನಾಯಿಗಳನ್ನು ಎರಡು ದಿನಗಳ ಕಾಲ ಬೆನ್ನಟ್ಟಿದ ದುಷ್ಕರ್ಮಿಗಳು 25 ಬೀದಿ ನಾಯಿಗಳಿಗೆ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಜುನ್ ಜುನ್ ಜಿಲ್ಲೆಯ ಕುಮವಾಸ್ ಎಂಬಲ್ಲಿ ದುಬ್ರಾ ನಿವಾಸಿ ಶೇಕ್ ಚಾಂದ್ ಬಾವರಿಯಾ ರೈಫಲ್ ಹಿಡಿದು ರಾಜಾರೋಷವಾಗಿ ತಿರುಗಾಡುತ್ತಾ ಸಿಕ್ಕಸಿಕ್ಕಲ್ಲಿ ಮನಬಂದಂತೆ ಬೀದಿನಾಯಿಗಳಿಗೆ ಗುಂಡಿಕ್ಕಿ ಕೊಲ್ಲುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದುಷ್ಕರ್ಮಿಯ ಅಟ್ಟಹಾಸಕ್ಕೆ ನಾಯಿಗಳ ಶವಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಇನ್ನು ಕೆಲವು ನಾಯಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ಕಂಡು ಬಂದಿವೆ.
ದುಬ್ರಾ ನಿವಾಸಿ ಬಾವರಿಯಾ ವಿಕೃತ ಘಟನೆಯ ವೀಡಿಯೊ ಚಿತ್ರೀಕರಣವನ್ನು ಸ್ವತಃ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದ್ದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ ಬೈಕ್ ನಲ್ಲಿ ಇಬ್ಬರು ಸಂಚರಿಸಿ ಬೀದಿ ನಾಯಿಗಳನ್ನು ಗುರಿಯಾಗಿ ರೈಫಲ್ ಹಿಡಿದು ಗುಂಡಿನ ದಾಳಿ ನಡೆಸಿದರೆ ಮತ್ತೊಂದು ವಾಹನದಲ್ಲಿ ಇದ್ದ ವ್ಯಕ್ತಿ ಚಿತ್ರೀಕರಣ ಮಾಡುತ್ತಿರುವುದು ಕಂಡು ಬಂದಿದೆ.



