Tuesday, June 30, 2026
Google search engine
Homeದೇಶಸವಾಲುಗಳ ನಡುವೆ ಭಾರತದ ಜಿಡಿಪಿ ದಾಖಲೆಯ ಶೇ. 8.2ಕ್ಕೆ ಜಿಗಿತ!

ಸವಾಲುಗಳ ನಡುವೆ ಭಾರತದ ಜಿಡಿಪಿ ದಾಖಲೆಯ ಶೇ. 8.2ಕ್ಕೆ ಜಿಗಿತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆ ಸೇರಿದಂತೆ ಹಲವು ಸವಾಲುಗಳ ನಡುವೆ ಭಾರತದ ಆರ್ಥಿಕ ಅಭಿವೃದ್ಧಿ ದರ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ.8.2 ಏರಿಕೆ ದಾಖಲಿಸಿದೆ.

ಕೇಂದ್ರ ಸರ್ಕಾರ ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಜಿಡಿಪಿ ದಾಖಲಾಗಿದೆ. ಆರ್ಥಿಕ ತಜ್ಞರು ಶೇ.7ರಿಂದ 7.5ರಷ್ಟು ಅಂದಾಜಿಸಿದ್ದ ಪ್ರಗತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ದಾಖಲಿಸಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, 2024-25ರ ಎರಡನೇ ಕ್ವಾರ್ಟರ್​ನಲ್ಲಿ ಭಾರತದ ರಿಯಲ್ ಜಿಡಿಪಿ 44.94 ಲಕ್ಷ ಕೋಟಿ ರೂ ಇತ್ತು. ಈ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಇದು 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಕ್ವಾರ್ಟರ್​ಗೆ ಹೋಲಿಸಿದರೆ ಆರ್ಥಿಕತೆ ಶೇ. 8.2ರಷ್ಟು ಬೆಳೆದಂತಾಗಿದೆ.

ನಿವ್ವಳ ಉತ್ಪನ್ನ ತೆರಿಗೆಗಳನ್ನು ಜಿಡಿಪಿಯಿಂದ ಕಳೆದರೆ ಉಳಿಯುವ ರಿಯಲ್ ಜಿವಿಎ 2025-26ರ 2ನೇ ಕ್ವಾರ್ಟರ್​ನಲ್ಲಿ 44.77 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ರಿಯಲ್ ಜಿವಿಎನಲ್ಲಿ ಶೇ. 8.1ರಷ್ಟು ಹೆಚ್ಚಾಗಿದೆ.

ಉತ್ಪಾದನಾ ಕ್ಷೇತ್ರದಲ್ಲಿ ಶೇ. 9.1ರಷ್ಟು ಬೆಳೆದಿದೆ. ಈ ಉತ್ಪಾದನಾ ವಲಯದ ಬೆಳವಣಿಗೆ ತುಸು ಅನಿರೀಕ್ಷಿತವೆನಿಸಿದೆ. ಭಾರತದ ಈ ಕ್ವಾರ್ಟರ್​ನ ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳ ಉತ್ಪಾದನೆ ಶೇ. 10.2ರಷ್ಟು ಬೆಳೆದಿದೆ. ಕೃಷಿ ವಲಯ ಶೇ. 3.5ರಷ್ಟು ಸಾಧಾರಣ ಬೆಳವಣಿಗೆ ಕಂಡಿದೆ. ವಿದ್ಯುತ್, ಗ್ಯಾಸ್, ನೀರು ಸರಬರಾಜು ಮೊದಲಾದ ನಾಗರಿಕ ಸೇವೆಗಳ ಸೆಕ್ಟರ್ ಕೂಡ ಶೇ. 4.4ರ ಸಾಧಾರಣ ಬೆಳವಣಿಗೆ ಕಂಡಿದೆ.

2047ರ ವೇಳೆಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಬೇಕೆನ್ನುವ ಸಂಕಲ್ಪ ಕೇಂದ್ರ ಸರ್ಕಾರದ್ದಾಗಿದೆ. ಈ ಹಂತಕ್ಕೆ ಭಾರತ ಹೋಗಬೇಕೆಂದರೆ ಮುಂದಿನ 22 ವರ್ಷ ಆರ್ಥಿಕತೆಯು ಶೇ. 7.8ರ ಸರಾಸರಿ ದರದಲ್ಲಿ ಬೆಳೆಯಬೇಕು ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲೂ (2024-25) ಇದೇ ಅಂದಾಜು ಮಾಡಲಾಗಿತ್ತು. ಎರಡು ದಶಕಗಳ ಕಾಲ ಶೇ. 8ರ ಸರಾಸರಿ ವೇಗದಲ್ಲಿ ಆರ್ಥಿಕತೆ ಬೆಳೆದರೆ 2047ಕ್ಕೆ ಭಾರತ ವಿಕಸಿತ ದೇಶವಾಗಲು ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments