ಬೀಜಿಂಗ್: ಹೊಸ ವಷದ ಮೊದಲ ದಿನವೇ ಚೀನಾ ತನ್ನ ಭೂಧಾಹವನ್ನು ಕಾರಿಕೊಂಡಿದೆ. ತೈವಾನ್ ದೇಶವನ್ನು ವಶ ಮಾಡಿಕೊಳ್ಳದೇ ಬಿಡುವುದಿಲ್ಲ ಎಂದು ಚೀನಾವು ಪ್ರತಿಜ್ಞೆ ಮಾಡಿದೆ.
ತೈವಾನ್ ಚೀನಾದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ವಶಪಡಿಸಿಕೊಳ್ಳುವ ನಮ್ಮ ದೃಢ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ.
ಹೊಸ ವರ್ಷದ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ತೈವಾನ್ ವಿಷಯದಲ್ಲಿ ನಮ್ಮನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ..” ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.
ತೈವಾನ್ ಮರುವಶ ಮಾಡಿಕೊಳ್ಳುವುದು ನಮ್ಮ ಹಕ್ಕು. ಏಕೀಕೃತ ಚೀನಾದ ಕನಸು ನನಸಾಗಬೇಕಾದರೆ ದ್ವೀಪ ರಾಷ್ಟ್ರವು ಚೀನಾದ ಭಾಗವಾಗಲೇಬೇಕು.
ತೈವಾನ್‌ಗಾಗಿ ಜಗತ್ತಿನ ಯಾವುದೇ ಶಕ್ತಿಯನ್ನು ನಾವು ಎದುರು ಹಾಕಿಕೊಳ್ಳಲು ಸಿದ್ಧ ಎಂದು ಕ್ಸಿ ಜಿನ್ಪಿಂಗ್ ಗುಡುಗಿದ್ದಾರೆ. ಈ ಮೂಲಕ ಚೀನಾ ಅಧ್ಯಕ್ಷರು ಪರೋಕ್ಷವಗಿ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.
ತಮ್ಮ ಹೊಸ ವರ್ಷದ ಭಾಷಣದಲ್ಲಿ “ತೈವಾನ್ ಜಲಸಂಧಿಯ ಎರಡೂ ಬದಿಯಲ್ಲಿರುವ ಚೀನಾದ ಜನರು ಒಂದೇ ಕುಟುಂಬದ ಸದಸ್ಯರು. ನಮ್ಮ ರಕ್ತ ಸಂಬಂಧಗಳನ್ನು ಯಾರೂ ಕಡಿದುಹಾಕಲು ಸಾಧ್ಯವಿಲ್ಲ.
ಮಾತೃಭೂಮಿಯ ಪುನರ್ ಏಕೀಕರಣದ ನಮ್ಮ ಐತಿಹಾಸಿಕ ಪ್ರಯತ್ನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕ್ಸಿ ಹೇಳಿದರು. ತೈವಾನ್ ಕಬಳಿಕೆಗೆ ಹವಣಿಸುತ್ತಿರುವ ಚೀನಾ, ದ್ವೀಪ ರಾಷ್ಟ್ರದ ಸುತ್ತಲೂ ನಿರಂತರವಾಗಿ ವಾಯು ಮತ್ತು ನೌಕಾ ಕವಾಯತುಗಳನ್ನು ನಡೆಸುತ್ತಲೇ ಇದೆ.
ಕಳೆದ ಮೇ ತಿಂಗಳಲ್ಲಿ ತೈವಾನ್ನ ಪ್ರಜಾಸತ್ತಾತ್ಮಕ ಚುನಾವಣೆ ಮುಗಿದು ಅಧ್ಯಕ್ಷ ಲೈ ಚಿಂಗ್-ಟೆ ಅಧಿಕಾರಕ್ಕೆ ಬಂದ ನಂತರ, ಚೀನಾ ದ್ವೀಪ ರಾಷ್ಟ್ರದ ಸಮೀಪ ಮೂರು ಸುತ್ತಿನ ಪ್ರಮುಖ ಮಿಲಿಟರಿ ಕಸರತ್ತುಗಳನ್ನು ನಡೆಸಿದೆ.
ಚೀನಾ ಹಲವು ಬಾರಿ ತನ್ನ ವಾಯುಗಡಿಯನ್ನು ಉಲ್ಲಂಘಿಸಿದೆ ಎಂದು ತೈವಾನ್ ಆರೋಪಿಸುತ್ತಲೇ ಬಂದಿದೆ. ಬೀಜಿಂಗ್ ಮತ್ತು ತೈಪೆ ಎರಡು ವಿಭಿನ್ನ ಜೀವನ ವಿಧಾನಗಳನ್ನು ಪ್ರತಿನಿಧಿಸುತ್ತವೆ. ತೈವಾನ್ ಪ್ರಜಾಪ್ರಭುತ್ವವಾಗಿದ್ದರೆ, ಚೀನಾ ಕಮ್ಯುನಿಸ್ಟ್ ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ, ಬೀಜಿಂಗ್ ತೈಪೆಯ ಮೇಲೆ ಒತ್ತಡವನ್ನು ತೀವ್ರಗೊಳಿಸಿದ್ದು, ದ್ವೀಪ ರಾಷ್ಟ್ರವನ್ನು ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ.