ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಕೋವಿಡ್ ಮಾದರಿ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ದೇಶದ ಜನತೆ ಈ ಸಂದಿಗ್ಧ ಸನ್ನಿವೇಶ ಎದುರಿಸಲು ಸಜ್ಜಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಕುರಿತು ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಇದರಿಂದ ತೈಲ ಹಾಗೂ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಸ ಆಗುವ ಸಾಧ್ಯತೆ ಇದೆ ಎಂದರು.
ಪ್ರಸ್ತುತ ಯುದ್ಧದಿಂದ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗಬಹುದು. ಆ ಪರಿಸ್ಥಿತಿ ಇನ್ನೂ ದೀರ್ಘಕಾಲ ಇರಬಹುದು. ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಿದಂತೆ ಈ ಸಂಕಷ್ಟವನ್ನು ಎದುರಿಸಲು ಒಗ್ಗಟ್ಟಿನಿಂದ ಇರಬೇಕು.
ಭಾರತ ತೈಲ ಮತ್ತು ಎಲ್ ಪಿಜಿಗೆ ಶೇ.60ರಷ್ಟು ವಿದೇಶವನ್ನು ಅವಲಂಬಿಸಿದ್ದೇವೆ. ಇರಾನ್ ಹಾಗೂ ಯುದ್ಧ ಪೀಡಿತ ದೇಶಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಹರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಹಡಗುಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಈ ಹಡಗುಗಳು ಈಗ ಹೊರಟಿವೆ ಎಂದು ಅವರು ಹೇಳಿದರು.
ದೇಶದಲ್ಲಿ ಎಲ್‌ಪಿಜಿ ಕೊರತೆ ವಿಷಯವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸರ್ಕಾರವು ಗೃಹ ಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡುತ್ತಿದೆ. ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತೆ ನೋಡಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಕಠಿಣ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಾಗರೂಕತೆಯಿಂದ ಇರುವಂತೆ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಜೊತೆಗೆ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದರು.
ಇರಾನ್‌ನಿಂದ ಸುಮಾರು 1,000 ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಇವರಲ್ಲಿ 700ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಕ್ರಮಕೈಗೊಳ್ಳುತ್ತಿದೆ ಎಂದು ಮೋದಿ ವಿವರಿಸಿದರು.
ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಅಂತರರಾಷ್ಟ್ರೀಯ ಜಲಮಾರ್ಗಗಳಿಗೆ ಅಡ್ಡಿಪಡಿಸುವುದು ಸ್ವೀಕಾರಾರ್ಹವಲ್ಲ. ಸಂಘರ್ಷದ ನಡುವೆಯೂ ದೇಶದ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತ ನಿರಂತರ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ನುಡಿದರು.
ಭಾರತವು ಸದಾ ಮಾನವೀಯತೆ ಮತ್ತು ಶಾಂತಿಯ ಪರವಾಗಿ ಧ್ವನಿ ಎತ್ತಿದೆ. ಸದ್ಯದ ಪರಿಸ್ಥಿತಿ ಶಮನಕ್ಕೆ ಮಾತುಕತೆ ಹಾಗೂ ರಾಜತಾಂತ್ರಿಕತೆಯೇ ಸೂಕ್ತ ಪರಿಹಾರ. ನಮ್ಮ ಎಲ್ಲಾ ಪ್ರಯತ್ನಗಳು ಉದ್ವಿಗ್ನತೆ ಕಡಿಮೆ ಮಾಡಿ ಸಂಘರ್ಷವನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿವೆ. ಮಾನವ ಜೀವಕ್ಕೆ ಅಪಾಯ ಉಂಟಾಮಾಡುವುದು ಮಾನವೀಯತೆಗೆ ವಿರುದ್ಧವಾದದ್ದು. ಆದ್ದರಿಂದ ಎಲ್ಲಾ ಕಡೆಯವರು ಶೀಘ್ರದಲ್ಲೇ ಶಾಂತಿಯುತ ಪರಿಹಾರಕ್ಕೆ ಬರಲೆಂದು ಭಾರತ ಮನವಿ ಮಾಡುತ್ತದೆ ಎಂದು ಪ್ರತಿಪಾದಿಸಿದರು.



