Thursday, May 14, 2026
Google search engine
Homeರಾಜ್ಯಕಡೂರು, ಬೀರೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಸಚಿವ ವಿ. ಸೋಮಣ್ಣ ಘೋಷಣೆ

ಕಡೂರು, ಬೀರೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಸಚಿವ ವಿ. ಸೋಮಣ್ಣ ಘೋಷಣೆ

ಬೀರೂರು: ಬೀರೂರು ಮತ್ತು ಕಡೂರು ರೈಲ್ವೆ ನಿಲ್ದಾಣಗಳು ಅಮೃತ್ ಭಾರತ್ ಯೋಜನೆಯಡಿ ಶೀಘ್ರದಲ್ಲಿ ಮೇಲ್ದರ್ಜೆಗೇರಲಿದ್ದು, ಈಗಾಗಲೇ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೀರೂರು ರೈಲ್ವೆ ನಿಲ್ದಾಣಕ್ಕೆ ಭಾನುವಾರ ರೈಲಿನಲ್ಲಿಯೇ ಆಗಮಿಸ ನಿಲ್ದಾಣ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ರೈಲು ಬೀರೂರಿನಲ್ಲೂ ನಿಲುಗಡೆಗೆ ಅನುಮತಿ ನೀಡಲಾಗುವುದು. ಅಲ್ಲದೇ 10 ಸಾವಿರ ಬೋಗಿಗಳ ತಯಾರಿಕೆಗೆ ಅವಕಾಶ ನೀಡಲಾಗುವುದು ಎಂದರು.

ಈ ಹಿಂದೆ ಇದ್ದ ರೈಲ್ವೆ ಬಜೆಟ್‌ನ್ನು ಸಾಮಾನ್ಯ ಬಜೆಟ್‌ಗೆ ಸೇರಿಸಿದ ಮೇಲೆ ಬಹಳಷ್ಟು ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ವೇಗ ಹೆಚ್ಚಿದೆ. ರಾಜ್ಯದ ಕೆಳ ಹಾಗೂ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.

ಈ ಹಿಂದಿನ ಸರ್ಕಾರದಿಂದ ರೈಲ್ವೆ ಇಲಾಖೆಗೆ ರೂ.830 ಕೋಟಿ ಅನುದಾನ ದೊರೆಯುತ್ತಿತ್ತು. ಆದರೆ ಮೋದಿ ಸರ್ಕಾರ 7644 ಕೋಟಿ ರೂ.ಗಳನ್ನು ನೀಡಿದೆ. ಹೊಸ ರೈಲುಗಳಿಗೆ 2009 ರಿಂದ 2016ರವರೆಗೆ 11,600 ಕೋಟಿಯಿಂದ 70 ಸಾವಿರ ಕೋಟಿ ರೂ. ಮಂಜೂರು ಮಾಡಿದೆ. 10 ವರ್ಷಗಳಲ್ಲಿ ರೈಲ್ವೆಯ 45 ಸಾವಿರ ಕೋಟಿ ಕಾಮಗಾರಿ ಪ್ರಗತಿಯಲ್ಲಿರುವುದು ಜನತೆ ಗಮನಿಸಬೇಕು ಎಂದರು.

ರಾಜ್ಯದ ಹಲವು ರೈಲ್ವೆ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಿದ್ದು ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವು ನಿಲ್ದಾಣಗಳ ಹೊಸ ಸಂಪರ್ಕಕ್ಕೆ ವೇಗ ದೊರೆಕಿದೆ. ಅಸಾಧ್ಯವಾಗಿದ್ದ ಹುಬ್ಬಳ್ಳಿ ಅಂಕೋಲ ಮಾರ್ಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರ ಕಾಳಜಿಯಿಂದ 17 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದೆ ಎಂದು ಅವರು ವಿವರಿಸಿದರು.

28 ಜಿಲ್ಲೆಗಳಿಗೆ ಭೇಟಿ ನೀಡಿದ್ದು 15-20 ವರ್ಷಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಕಾಮಗಾರಿಗಳಿಗೆ ಜೀವ ತುಂಬಲಾಗಿದೆ. ಅಲ್ಲದೆ ರೈಲ್ವೆ ಇಲಾಖೆ 1216 ಎಕರೆ ಭೂಸ್ವಾಧೀನಕ್ಕಾಗಿ 3,300 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವ್ಯಯಿಸಿದೆ ಎಂದರು.

1900 ಕೋಟಿ ವೆಚ್ಚದಲ್ಲಿ 61 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದೆರ್ಜೆಗೇರಿಸುವ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದೆ. ತುಮಕೂರು ರೈಲ್ವೆ ನಿಲ್ದಾಣ ರೂ.೧೪೦ ಕೋಟಿ ಗಳಲ್ಲಿ ಸಿದ್ದಗಂಗಾ ಶ್ರೀಗಳ ನಾಮಂಕಿತದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ರಾಜ್ಯದ ರೈಲ್ವೆ ವಿದ್ಯುದೀಕರಣ ಕಾಮಗಾರಿ ಶೇ.97 ರಷ್ಟು ಪೂರ್ಣಗೊಂಡಿದ್ದು, 2026 ಡಿಸಂಬರ್ ತಿಂಗಳೊಳಗೆ ಸಂಪೂರ್ಣಗೊಳ್ಳಲಿದೆ ಎಂದು ಸೋಮಣ್ಣ ವಿವರಿಸಿದರು.

11 ವರ್ಷಗಳಲ್ಲಿ 644 ಮೇಲ್ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸುಸಜ್ಜಿತ ಶೌಚಾಲಯಗಳ ನಿರ್ಮಾಣ, ಉಪಹಾರ ಕೇಂದ್ರಗಳು ಹಾಗೂ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇಶದಲ್ಲಿ 144 ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಈ ಭಾಗಕ್ಕೂ ಹೆಚ್ಚಿನ ರೈಲು ಸಂಚಾರಕ್ಕೆ ಒತ್ತು ನೀಡಲಾಗುವುದು. 89 ರೈಲ್ವೆ ನಿಲ್ದಾಣಗಳಲ್ಲಿ ಇಲಾಖೆ ವತಿಯಿಂದ ಗುಣಮಟ್ಟದ ಆಹಾರ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈಲುಗಳ ಸಂಚಾರ ಸುರಕ್ಷತೆಗಾಗಿ ರೈಲ್ವೆ ಕವಚ್ ಯೋಜನೆ ರೂಪಿತಗೊಂಡಿದ್ದು, 10೦ ಸಾವಿರ ಕವಚಗಳನ್ನು 1700 ಕಿಮೀಗೆ ಅಳವಡಿಸಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ ರಾಜ್ಯದ ಜನರಿಗೆ ಉದ್ಯೋಗ ನೀಡುವಲ್ಲಿ ಗಮನಹರಿಸಲಾಗಿದೆ. 10 ಸಾವಿರ ಸಾಮಾನ್ಯ ಬೋಗಿಗಳನ್ನು ರೈಲುಗಳಿಗೆ ಜೋಡಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇದೇ 7ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ 4 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಕೇರಳ ಎರ್ನಾಕೊಲಂನಿಂದ ಬೆಂಗಳೂರು ಕೂಡ ಸೇರಿದೆ. ಅಜ್ಜಂಪುರ ಸಮೀಪದ ಶಿವನಿಯಲ್ಲಿ ಯಶವಂತಪುರ ವಾಸ್ಕೊ ರೈಲು ನಿಲುಗಡೆಗೆ ಇದ್ದ ಬೇಡಿಕೆಯನ್ನು ಪೂರೈಸಲಾಗಿದೆ ನುಡಿದರು.

ಕೇಂದ್ರ ಜಲಶಕ್ತಿ ಸಚಿವಾಲಯದಿಂದ ದೇಶದ ಜನರಿಗೆ ಶುದ್ಧ ಕುಡಿಯುವ ನೀರು ದೊರಕಿಸುವಲ್ಲಿ ಎಲ್ಲಾ ಪ್ರಯತ್ನ ನಡೆದಿದ್ದು, ರಾಜ್ಯದ ಅಸಹಾಕಾರದಿಂದ ಯೋಜನೆ ಕುಂಠಿತಗೊಂಡಿದೆ. 3 ಕೋಟಿ ಜನರಿಗೆ ತಲುಪಿಸುವ ಯೋಜನೆಯನ್ನು 15 ಕೋಟಿ ಜನರಿಗೆ ವಿಸ್ತರಿಸಿದೆ. ರಾಜ್ಯ 21ನೇ ಸ್ಥಾನದಲ್ಲಿರುವುದು ಅಸಹಾಕಾರದ ಒಂದು ಭಾಗ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ಎಂದರು.

ಬೀರೂರು ರೈಲ್ವೆ ನಿಲ್ದಾಣದಲ್ಲಿ ಇಲಾಖೆಗೆ ಸೇರಿರುವ 180 ಎಕರೆ ಜಾಗ ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಡಿಆರ್‌ಎಂ ಮುದಿತ್ ಮಿಥಲ್, ಡಿಒಎಂ ಮಲ್ಲಿಗಾ, ಡಿಸಿಎಂ ಗಿರೀಶ್, ಎಒಎಂ ಅನಿಲ್, ಸಿಸಿಐ ಮಂಜುನಾಥ್ ಹಾಗೂ ಅಧಿಕಾರಿಗಳು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಉಪಾಧ್ಯಕ್ಷೆ ಸವಿತಾ ರಮೇಶ್, ಕಡೂರು ತಹಸೀಲ್ದಾರ್ ಪೂರ್ಣಿಮಾ, ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಎನ್.ದೇವರಾಜ್, ಕಲ್ಮುರಡಪ್ಪ ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments