ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಲು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ, ಜೆ.ಟಿ. ಪಾಟೀಲ್ ಅವರ ಪ್ರಸ್ತಾವಗಳಿಗೆ ಉತ್ತರಿಸಿದ ಸಚಿವರು, ಈ ಸಲ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ಬೆಳೆ ನಷ್ಟವಾಗಿರುವುದು ಸರ್ಕಾರದ ಗಮನದಲ್ಲಿದೆ. ಬೆಳೆ ನಷ್ಟದ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷಾ ವರದಿ ಬಂದ ನಂತರ ಎನ್ಡಿಆರ್ಎಫ್ ನಿಯಾಮಾವಳಿಗಳಂತೆ ಪರಿಹಾರವನ್ನು ನೀಡಲಾಗುವುದು. ಜೊತೆಗೆ ಬೆಳೆ ನಷ್ಟದಿಂದ ಕಷ್ಟದಲ್ಲಿರುವ ರೈತರಿಗೆ ವಿಮಾ ಹಣವನ್ನು ಸಕಾಲದಲ್ಲಿ ತಲುಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಂಡಿದ್ದೇವೆ. ಈ ಹಿಂದೆ ಬೆಳೆ ವಿಮೆಗೆ 16 ಲಕ್ಷ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಬೆಳೆ ವಿಮೆಗೆ ನೋಂದಾಯಿಸಿರುವ ರೈತರ ಸಂಖ್ಯೆ 27 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ, ವಿಜಯಪುರ ಜಿಲ್ಲೆಯ ಕೆಲವೆಡೆ ಅತೀ ನೀರಾವರಿಯಿಂದ ಸವಳು-ಜವಳು ಇದ್ದು, ಇದನ್ನು ಸರಿಪಡಿಸಲು ಅಗತ್ಯ ಹಣ ಒದಗಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ 660 ಕೋಟಿ ರೂ. ಬೆಳೆ ವಿಮೆ ರೈತರಿಗೆ ಸಿಕ್ಕಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
3,352.57 ಕೋಟಿ ಪೂರಕ ಅಂದಾಜು ಮಂಡನೆ:
2025-26ನೇ ಸಾಲಿನ 3,352.57 ಕೋಟಿ ರೂ. ಮೊತ್ತದ ರಾಜ್ಯದ ಪೂರಕ ಅಂದಾಜುಗಳನ್ನು (ಮೊದಲನೇ ಕಂತು) ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಪೂರಕ ಅಂದಾಜು ಮಂಡಿಸಿದರು.
ಪೂರಕ ಅಂದಾಜುಗಳು ಹೆಚ್ಚುವರಿ ಅನುದಾನಗಳು ಮತ್ತು ಲೆಕ್ಕ ಹೊಂದಾಣಿಕೆಗಳಿಗೆ ಸಂಬಂಧಿಸಿವೆ. ಒಟ್ಟು ಮೊತ್ತದಲ್ಲಿ 0.60 ಕೋಟಿ ರೂ. ಪ್ರಕೃತ ವೆಚ್ಚ ಮತ್ತು 3,351.97 ಕೋಟಿ ರೂ. ಪುರಸ್ಕೃತ ವೆಚ್ಚ ಸೇರಿವೆ. ಮೀಸಲು ನಿಧಿಯಿಂದ ಭರಿಸಲಾಗುವ 262.20 ಕೋಟಿ ರೂ. ಸಹ ಪುರಸ್ಕೃತವಾಗಬೇಕಾಗಿದೆ. ಇದರಲ್ಲಿ ಕೇಂದ್ರ ಸಹಾಯಕ್ಕೆ ಸಂಬಂಧಿಸಿದ 820.70 ಕೋಟಿ ಸೇರಿದೆ. ಹೊರ ಹೋಗುವ ನಿವ್ವಳ ನಗದು ಮೊತ್ತ 2,269.66 ಕೋಟಿ ರೂ. ಆಗಿದೆ. ಈ ಮೊತ್ತವನ್ನು ರಾಜ್ಯದ ರಾಜಸ್ವ ಸ್ವೀಕೃತಿಗಳು, ವೆಚ್ಚದ ಮರುಪ್ರಾಧಾನ್ಯತೆ, ಸಂಭವನೀಯ ಉಳಿತಾಯ ಮತ್ತು ಸಾಲದ ಮೂಲಕ ಭರಿಸಲಾಗುತ್ತದೆ ಎಂದು ಹೇಳಲಾಗಿದೆ


