ಬೆಂಗಳೂರಿನ ಜನಪ್ರಿಯ ಸರಣಿ ಎಂಪೈರ್ ರೆಸ್ಟೋರೆಂಟ್ ಗಳಲ್ಲಿ ಸಿದ್ಧಪಡಿಸಲಾಗುವ ಕಬಾಬ್ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಯೋಗಾಲಯದ ವರದಿ ಹೇಳಿದೆ.
ಎಂಪೈರ್ ರೆಸ್ಟೋರೆಂಟ್ ನ ಗಾಂಧಿನಗರ ಶಾಖೆಯಲ್ಲಿ ಗ್ರಾಹಕರಿಗೆ ನೀಡಲಾಗುವ ಕಬಾಬ್ ಸುರಕ್ಷಿತವಲ್ಲ ಎಂದು ಪ್ರಯೋಗಾಲಯದ ವರದಿ ಎಚ್ಚರಿಸಿದೆ.
ಆಹಾರ ಸುರಕ್ಷತಾ ಅಧಿಕಾರಿ ಅಂಬರೀಷ್ ಗೌಡ ಜೂನ್ 27 ರಂದು ಆನಂದ್ ರಾವ್ ವೃತ್ತದ ಬಳಿಯ ಎಂಪೈರ್ನ ಔಟ್‌ಲೆಟ್‌ನಿಂದ ಸಂಗ್ರಹಿಸಿದ 2 ಕೆಜಿ ಚಿಕನ್ ಕಬಾಬ್ ಮಾದರಿಗಳನ್ನು (ತಲಾ 500 ಗ್ರಾಂನ 4 ಪ್ಯಾಕೆಟ್) ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಜುಲೈ 11 ರಂದು ನಡೆದ ಪರೀಕ್ಷಾ ಫಲಿತಾಂಶಗಳು, ಚಿಕನ್ ಕಬಾಬ್‌ಗಳು ಆಹಾರ ಉತ್ಪನ್ನ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳ ನಿಯಮಗಳು, 2011 ರ ಅಡಿಯಲ್ಲಿ ವಿವರಿಸಲಾದ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ ಎಂದು ವರದಿ ದೃಢಪಡಿಸಿದೆ. ಅಲ್ಲದೇ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಅಡಿಯಲ್ಲಿ ಈ ರೆಸ್ಟೋರೆಂಟ್ ನ ಕಬಾಬ್ ಅಸುರಕ್ಷಿತ ಎಂದು ಘೋಷಿಸಲಾಗಿದೆ.
ಬಿಬಿಎಂಪಿಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಉತ್ತರ ವಲಯ) ರೆಸ್ಟೋರೆಂಟ್‌ಗೆ ಔಪಚಾರಿಕ ನೋಟಿಸ್ ನೀಡಿದ್ದು, ಪ್ರತಿಕ್ರಿಯಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಆಹಾರ ಮಾದರಿಯ ಎರಡನೇ ಭಾಗವನ್ನು ಮರುಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಬಹುದು ಎಂದು ರೆಸ್ಟೋರೆಂಟ್‌ಗೆ ತಿಳಿಸಲಾಗಿದೆ, ಆದರೆ ಅದು ರೆಸ್ಟೋರೆಂಟ್ ನವರು ಸ್ವಂತ ಖರ್ಚು ಮಾಡಬೇಕಾಗಿದೆ.