Wednesday, November 12, 2025
Google search engine
Homeರಾಜ್ಯರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನಿಷ್ಠ 25 ವಿದ್ಯಾರ್ಥಿಗಳ ಪರಿಸರ,‌ ಹವಾಮಾನ ಕ್ಲಬ್ ಸ್ಥಾಪನೆಗೆ ಆದೇಶ: ಡಿಸಿಎಂ...

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನಿಷ್ಠ 25 ವಿದ್ಯಾರ್ಥಿಗಳ ಪರಿಸರ,‌ ಹವಾಮಾನ ಕ್ಲಬ್ ಸ್ಥಾಪನೆಗೆ ಆದೇಶ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿಯೂ ಪರಿಸರ,‌ ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ನಡೆದ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, “ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಈ ಜಾಗೃತಿ ಕ್ಲಬ್ ಗಳನ್ನು ರಚನೆ ಮಾಡಬೇಕು. ಪ್ರಕೃತಿ ಉಳಿಸುವ ದೊಡ್ಡ ಹೋರಾಟದ ಹಾಗೂ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂದು ಈ ಆದೇಶ ಮಾಡಲಾಗಿದೆ. ಒಂದೊಂದು ಶಾಲೆ ಮರ ಬೆಳೆಸಲು ಆಯಾಯ ಪ್ರದೇಶಗಳನ್ನು ದತ್ತು ಪಡೆಯಬೇಕು” ಎಂದು ತಿಳಿಸಿದರು.

“ಹಸಿರು ಮತ್ತು ಸ್ವಚ್ಚತೆ ಇದೇ ನಮ್ಮ ಸರ್ಕಾರದ ಧ್ಯೇಯ. ಇದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ಕರ್ನಾಟಕದ‌ ದೊಡ್ಡ ಆಸ್ತಿಯೇ ನಮ್ಮ ಪ್ರಕೃತಿ. ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ, ಜವಾಬ್ದಾರಿಯಾಗಬೇಕು” ಎಂದರು.

“ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ತಿಳಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಕ್ರಿಯೆಯಲ್ಲಿ ಇದ್ದಾರೆ.‌ ಎರಡು ದಿನದ ಹಿಂದೆ ದೆಹಲಿ,‌ ಅಹಮದಾಬಾದ್‌ ನಲ್ಲಿ‌ ಇದ್ದೆ ಅಲ್ಲಿನ ಉಷ್ಣಾಂಶ ಹತ್ತಿರತ್ತಿರ ‌49 ಡಿಗ್ರಿಯಿತ್ತು.‌ ಬೆಂಗಳೂರಲ್ಲಿ 22- 23 ಇದೆ. ಈ ವಾತಾವರಣ ನಮ್ಮ ಕರ್ನಾಟಕದ,‌ ಬೆಂಗಳೂರಿನ ಆಸ್ತಿ” ಎಂದು ತಿಳಿಸಿದರು.

“ಮನುಷ್ಯ ಹಾಗೂ ಅವನ ಜೀವನ ಪದ್ಧತಿ ಪ್ರಕೃತಿಯ ಜೊತೆ ಬೆಸೆದುಕೊಂಡಿದೆ. ನಾವೆಲ್ಲರೂ ಪರಿಸರದ ಒಂದು ಭಾಗವಷ್ಟೇ. ಶುದ್ದ ಗಾಳಿ, ನೀರು, ಪರಿಸರ ನಿರ್ಮಾಣ ನಮ್ಮೆಲ್ಲರ ಅತಿದೊಡ್ಡ ಜವಾಬ್ದಾರಿ. ಪರಿಸರ ಉಳಿಸುವ ಅರಿವು ಯುವ ಜನಾಂಗಕ್ಕೆ ಬರಬೇಕು. ಪರಿಸರ ನಮ್ಮ‌ ಮನೆ ಅದನ್ನು ನಾಶ‌ ಮಾಡದೇ ಇರುವಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ” ಎಂದರು.

“ಸುಮಾರು 5 ಸಾವಿರಕ್ಕೂ ಹೆಚ್ಚು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ವಿಧಾನಸೌಧದ ಸುತ್ತಲೂ ನಡಿಗೆ ಮಾಡಿ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನಾನು ಸಹ ಶಾಲಾ ದಿನಗಳಲ್ಲಿ ಇದರ ಭಾಗವಾಗಿದ್ದವನು. ಈ ಸಂಘಟನೆ ಬೆಳೆಸುವುದು ನಮ್ಮ ಬದ್ಧತೆ. ಪರಿಸರ ದಿನಾಚರಣೆ ಮಾಡುವುದು ನಮಗಾಗಿ ಅಲ್ಲ ಮುಂದಿನ ಪೀಳಿಗೆಗಾಗಿ” ಎಂದರು.

“ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ಪರಿಸರ ಪ್ರಜ್ಞೆ ಬೆಳೆಯಲಿ ಎಂದು ಸರ್ಕಾರ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಸಚಿವರಾದ ಈಶ್ವರ ಖಂಡ್ರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದೆ” ಎಂದು ತಿಳಿಸಿದರು.

“ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರಾದವರು. ನೀವುಗಳು ರಜೆ ಸಮಯದಲ್ಲಿ ವಿಧಾನಸೌಧವನ್ನು ವೀಕ್ಷಣೆ ಮಾಡಬೇಕು. ಇಡೀ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಕೌತುಕ ಇಲ್ಲಿದೆ. ನ್ಯಾಯಾಂಗ,‌ ಕಾರ್ಯಾಂಗ,‌ ಶಾಸಕಾಂಗ ಒಂದೇ‌ ಕಡೆ‌‌ ಸಮಾಗಮವಾಗಿವೆ. ದೇಶದ ಭವಿಷ್ಯವನ್ನು ಚರ್ಚೆ‌ ಮಾಡುವ ಸ್ಥಳ ಇದಾಗಿದೆ” ಎಂದರು.

“ಹಸಿರು ಉಳಿಸಿ, ಮರ‌ ಬೆಳೆಸಿ.‌ ಕಸ ತ್ಯಜಿಸಿ ಮರ ಬೆಳೆಸಿ‌‌” ಎಂದು ವಿದ್ಯಾರ್ಥಿಗಳೊಟ್ಟಿಗೆ ಡಿಸಿಎಂ ಘೋಷಣೆ ಕೂಗಿದರು.”

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments