ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ ಟಿಡಿಸಿ) 24 ಹೋಟೆಲ್ಗಳು ಹಾಗೂ 2 ರೆಸ್ಟೋರೆಂಟ್ಗಳನ್ನು ₹100 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸಿಗರಿಗೆ ಕೇವಲ ವಸತಿ ಸೌಲಭ್ಯ ಒದಗಿಸುವುದಷ್ಟೇ ಯೋಜನೆಯ ಉದ್ದೇಶವಲ್ಲ. ಉತ್ತಮ ಕೊಠಡಿಗಳು, ಗುಣಮಟ್ಟದ ಆಹಾರ, ಸ್ವಚ್ಛತೆ, ವೃತ್ತಿಪರ ಆತಿಥ್ಯ, ಸುಗಮ ಆನ್ಲೈನ್ ಕಾಯ್ದಿರಿಸುವಿಕೆ ಹಾಗೂ ಒಟ್ಟಾರೆ ಅತಿಥಿ ಅನುಭವವನ್ನು ಉತ್ತಮಪಡಿಸುವುದು ಪ್ರಮುಖ ಗುರಿಯಾಗಿದೆ ಎಂದರು.
ಕೆಎಸ್ಟಿಡಿಸಿಯ ಹಲವು ಮಯೂರ ಹೋಟೆಲ್ಗಳು ಹಂಪಿ, ಜೋಗ ಜಲಪಾತ, ನಂದಿ ಬೆಟ್ಟ, ಮಡಿಕೇರಿ, ಕೆಆರ್ಎಸ್ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಸಮೀಪದ ವಿಶಿಷ್ಟ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಆತಿಥ್ಯ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗದಂತಹ ಸ್ಥಳಗಳಲ್ಲಿ ಕೆಎಸ್ಟಿಡಿಸಿಯ ಆಸ್ತಿಗಳು ಇರುವುದೇ ನಿಗಮದ ಪ್ರಮುಖ ಬಲವಾಗಿದೆ ಎಂದು ಹೇಳಿದರು.
ಸಮಗ್ರ ಸುಧಾರಣೆ:
₹100 ಕೋಟಿ ಮೇಲ್ದರ್ಜೆ ಯೋಜನೆಯಡಿ ಹೋಟೆಲ್ ಕೊಠಡಿಗಳು, ಸ್ನಾನಗೃಹಗಳು, ರೆಸ್ಟೋರೆಂಟ್ಗಳು, ಅಡುಗೆಮನೆಗಳು, ಸ್ವಾಗತ ಕೇಂದ್ರಗಳು, ಸಾಮಾನ್ಯ ಪ್ರದೇಶಗಳು, ಪೀಠೋಪಕರಣಗಳು, ಬೆಳಕಿನ ವ್ಯವಸ್ಥೆ, ಉದ್ಯಾನಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಂತ ಹಂತವಾಗಿ ಸುಧಾರಿಸಲಾಗುವುದು.
ಇದರ ಜೊತೆಗೆ ಸ್ವಚ್ಛತೆ, ಆಹಾರದ ಗುಣಮಟ್ಟ, ಕೊಠಡಿ ನಿರ್ವಹಣೆ, ಸಿಬ್ಬಂದಿಯ ಆತಿಥ್ಯ ಕೌಶಲ್ಯ, ಆನ್ಲೈನ್ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಹಾಗೂ ಅತಿಥಿಗಳ ಪ್ರತಿಕ್ರಿಯೆ ಸಂಗ್ರಹ ಮತ್ತು ಸ್ಪಂದನಾ ವ್ಯವಸ್ಥೆಗಳನ್ನು ಬಲಪಡಿಸಲಾಗುವುದು. ಪ್ರತಿ ಹೋಟೆಲ್ನ ಸ್ಥಳ, ಪ್ರವಾಸಿಗರ ಬೇಡಿಕೆ ಹಾಗೂ ಕಾರ್ಯಸಾಧ್ಯತೆಯನ್ನು ಆಧರಿಸಿ 3-ಸ್ಟಾರ್ ಅಥವಾ ಅದಕ್ಕಿಂತ ಉತ್ತಮ ಮಟ್ಟದ ಸೌಲಭ್ಯ ಮತ್ತು ಸೇವಾ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.
ಗುಣಮಟ್ಟದಲ್ಲಿ ರಾಜಿಯಿಲ್ಲ:
ಸರ್ಕಾರಿ ಹೋಟೆಲ್ ಎಂಬ ಕಾರಣಕ್ಕೆ ಪ್ರವಾಸಿಗರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಇರಬಾರದು. ಸ್ಥಳ, ಸೌಲಭ್ಯ ಮತ್ತು ಸೇವೆ—ಈ ಮೂರರಲ್ಲೂ ಮಯೂರ ಹೋಟೆಲ್ಗಳು ಉತ್ತಮ ಮಾನದಂಡ ನಿರ್ಮಿಸಬೇಕು. ₹100 ಕೋಟಿ ಹೂಡಿಕೆಯ ಮೂಲಕ ಪ್ರವಾಸಿಗರ ಒಟ್ಟಾರೆ ಅನುಭವವನ್ನು ಮೇಲ್ದರ್ಜೆಗೇರಿಸಿ, ಕೆಎಸ್ಟಿಡಿಸಿಯ ಆಸ್ತಿಗಳನ್ನು ಹೆಚ್ಚು ಸ್ಪರ್ಧಾತ್ಮಕ ಹಾಗೂ ಆದಾಯದಾಯಕವಾಗಿಸುವುದು ಸರ್ಕಾರದ ಗುರಿಯಾಗಿದೆ ಎಂದರು.
ಹಂತ ಹಂತ ಅನುಷ್ಠಾನ:
ಕೆಎಸ್ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್ ಮಾತನಾಡಿ, ಮಯೂರ ಹೋಟೆಲ್ಗಳಿಗೆ ವಿಶಿಷ್ಟ ಸ್ಥಳಗಳ ಬಲದ ಜೊತೆಗೆ ಜನರಿಗೆ ಪರಿಚಿತವಾದ ಹೆಸರೂ ಇದೆ. ಆಧುನಿಕ ಸೌಲಭ್ಯಗಳು ಹಾಗೂ ಉತ್ತಮ ಸೇವೆಯೊಂದಿಗೆ ಹೋಟೆಲ್ಗಳನ್ನು ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು, ಕೊಠಡಿಗಳ ಬಳಕೆಯನ್ನು ಹೆಚ್ಚಿಸಲು ಹಾಗೂ ಆದಾಯವನ್ನು ಗಣನೀಯವಾಗಿ ವೃದ್ಧಿಸಲು ಸಾಧ್ಯವಾಗಲಿದೆ ಎಂದರು.
₹100 ಕೋಟಿ ಯೋಜನೆಯನ್ನು ಆದ್ಯತೆಯ ಆಧಾರದ ಮೇಲೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಈ ಯೋಜನೆಯನ್ನು ಕೇವಲ ಕಟ್ಟಡಗಳ ನವೀಕರಣಕ್ಕೆ ಸೀಮಿತಗೊಳಿಸಿಲ್ಲ. ಪ್ರತಿಯೊಂದು ಆಸ್ತಿಯ ಸ್ಥಳ, ಪ್ರವಾಸಿಗರ ಬೇಡಿಕೆ, ಪ್ರಸ್ತುತ ಬಳಕೆ ಹಾಗೂ ಆದಾಯದ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿ ಸುಧಾರಣಾ ಯೋಜನೆ ರೂಪಿಸಲಾಗುವುದು ಎಂದರು.
ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸೇವಾ ಗುಣಮಟ್ಟ, ಕೊಠಡಿ ನಿರ್ವಹಣೆ, ಆಹಾರದ ಗುಣಮಟ್ಟ, ಆನ್ಲೈನ್ ಕಾಯ್ದಿರಿಸುವಿಕೆ ಹಾಗೂ ಅತಿಥಿಗಳ ಪ್ರತಿಕ್ರಿಯೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮಯೂರ ಹೋಟೆಲ್ಗಳಲ್ಲಿ ಒಟ್ಟಾರೆ ಆತಿಥ್ಯ ಅನುಭವವನ್ನು ಉತ್ತಮಪಡಿಸಲಾಗುವುದು ಎಂದು ಹೇಳಿದರು.
