ಬೆಂಗಳೂರು: ಕೆಆರ್ ನಗರದಲ್ಲಿ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ನೇತೃತ್ವದ ನ್ಯಾಯಾಲಯ ಶುಕ್ರವಾರ ಹಾಸನ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಗಳಲ್ಲಿ 4ನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದ್ದಾರೆ.
ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ್ದೂ ಅಲ್ಲದೇ ಪದೇಪದೇ ಅತ್ಯಾಚಾರ ಎಸಗಿದ ಸೆಕ್ಷನ್ ಆಧಾರದ ಮೇಲೆ ಶಿಕ್ಷೆ ಪ್ರಕಟಿಸಲಾಗಿದ್ದು, ಕನಿಷ್ಠ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ ವೇಳೆ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಮರಳುತ್ತಿದ್ದಂತೆ ಬಂಧಿಸಲಾಗಿದ್ದು, ಕಳೆದ 14 ತಿಂಗಳಿಂದ ಜೈಲುವಾಸಿಯಾಗಿರುವ ಪ್ರಜ್ವಲ್ ರೇವಣ್ಣ ತೀರ್ಪು ಪ್ರಕಟವಾಗುತ್ತಿದ್ದಂತೆ ಕಣ್ಣೀರು ಒರೆಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ತಾಂತ್ರಿಕ ಸಾಕ್ಷ್ಯಗಳ ವಿವರಗಳನ್ನ ಪಡೆದಿತ್ತು. ಈ ವರದಿಗಳ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದೆ. ತಾಂತ್ರಿಕ ಸಾಕ್ಷ್ಯಗಳಲ್ಲಿ ಗೂಗಲ್ ಮ್ಯಾಪ್ ಆಧರಿಸಿ ಮಹಜರು ನಡೆಸಲಾಗಿದೆ.
ಪ್ರಜ್ವಲ್ ರೇವಣ್ಣಗೆ ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ. ಇದರಿಂದ ಉಳಿದ ಮೂರು ಪ್ರಕರಣಗಳ ಮೇಲೆ ಪರಿಣಾಮ ಬೀರಲಿದ್ದು, ಉಳಿದ ಮೂರು ಪ್ರಕರಣಗಳಲ್ಲಿ ಜಾಮೀನು ದೊರೆಯುವುದು ಅಸಾಧ್ಯವಾಗಿದ್ದು, ಈ ಪ್ರಕರಣಗಳಲ್ಲಿಯೂ ದೋಷಿಯಾಗುವ ಸಾಧ್ಯತೆ ಇದೆ.


