ಐಎಎಸ್ ಅಧಿಕಾರಿ ಸೇರಿ ಮೂವರು ಸರ್ಕಾರಿ ಅಧಿಕಾರಿಗಳಿಗೆ ಆದಾಯಕ್ಕಿಂತ ಅಧಿಕ ಆದಾಯ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಬುಧವಾರ ಬೆಳಂಬೆಳಗ್ಗೆ ಶಾಕ್ ನೀಡಿದೆ.
ಬೆಂಗಳೂರು ಸೇರಿದಂತೆ ಮೈಸೂರು, ಕೊಪ್ಪಳ ಮತ್ತು ಬಳ್ಳಾರಿಯ ಸರ್ಕಾರಿ ಅಧಿಕಾರಿಗಳಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಆರಂಭಿಸಿದೆ.
ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಹಿರಿಯ IAS ಅಧಿಕಾರಿ ವಾಸಂತಿ ಅಮರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರು ನಗರ ವಿಶೇಷ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಸಂತಿ ಅಮರ್ ಸರ್ಕಾರಿ ಜಮೀನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆದಿದೆ.
ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿರುವ ಪಾಲಿಕೆ ಉಪ ವಿಭಾಗಧಿಕಾರಿ ವೆಂಕಟರಾಮ್ ಹಾಗೂ ಮೈಸೂರಿನ ಸಾತಗಳ್ಳಿಯ ಜೆಪಿನಗರದಲ್ಲಿರುವ ಕೌಶಲ್ಯಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಮನೆ ಮೇಲೂ ದಾಳಿ ಮಾಡಲಾಗಿದೆ.
ಬಳ್ಳಾರಿಯಲ್ಲಿ ಮೂರು ಕಡೆ ದಾಳಿ
ಬಳ್ಳಾರಿಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಲಾಗಿದೆ. ಬೆಂಗಳೂರು ಟೌನ್ ಮತ್ತು ರೂರಲ್ ಪ್ಲ್ಯಾನಿಂಗ್ ಆಫೀಸರ್ ಮಾರುತಿ ಬಗಲಿಗೆ ಸೇರಿದ 3 ಸ್ಥಳಗಳ ಮೇಲೆ ದಾಳಿ ಮಾಡಿರುವ ಬೆಂಗಳೂರು ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಬೆಂಗಳೂರು ನಿವಾಸಿಯಾಗಿರುವ ಅಧಿಕಾರಿ ಮಾರುತಿ ಬಗಲಿ ವಿರುದ್ಧ ರಾಜ್ಯದ ಹಲವೆಡೆ ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ.
ಕೊಪ್ಪಳ ನಗರದಲ್ಲೂ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿ ಮಲಗಿದ್ದ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಉಪ ನಿದೇರ್ಶಕ ಶೆಕು ಚವ್ಹಾಣ್ಗೆ ಶಾಕ್ ನೀಡಿದ್ದಾರೆ. ಲೋಕಾ ಅಧಿಕಾರಿಗಳನ್ನು ಶೆಕು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುನೀಲ ಮೇಗಳಮನಿ ನೇತೃತ್ವದಲ್ಲಿ ಅಭಿಷೇಕ ಬಡಾವಣೆ ಹಾಗೂ ಕೀರ್ತಿ ಕಾಲೋನಿಯಲ್ಲಿರುವ ಶೇಕು ಚವ್ಹಾಣ್ಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲೂ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.



