ಬೆಂಗಳೂರು: ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಂಬಂಧಿಸಿದ ಎಲ್ಲಾ ಒಳಪಂಗಡಗಳ ಹಿತಾಸಕ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಹಳೆಯ ಒಳ ಮೀಸಲಾತಿ ಪದ್ಧತಿಗೆ ಆಗ್ರಹಿಸಿ ದಲಿತ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮುಖಂಡರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು.
ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಪ್ರತಿಯೊಂದು ಸಾಧಕಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಲಾಗುವುದು. ನಂತರ ಎಲ್ಲರಿಗೂ ನ್ಯಾಯ ಸಿಗುವಂತಹ ಸೂತ್ರವನ್ನು ರೂಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ ನಾವು ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಯಾವುದೇ ಉಪಕ್ರಮವನ್ನು ಜಾರಿಗೆ ತರುವ ಮೊದಲು ಎಲ್ಲ ಮಗ್ಗುಲುಗಳಿಂದಲೂ ಚರ್ಚಿಸಬೇಕಾಗುತ್ತದೆ ಎಂದು ಅವರು ಪ್ರತಿಭಟನಾನಿರತರಿಗೆ ಆಶ್ವಾಸನೆ ನೀಡಿದ್ದಾರೆ.
ಧರಣಿ ನಿರತರ ಪರವಾಗಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಮುದಾಯದ ಹಲವು ಸ್ವಾಮೀಜಿಗಳು ಮತ್ತು ಮುಖಂಡರು ಇದ್ದರು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಇದ್ದರು.



