ಸರ್ಕಾರಿ ನಿಧಿ ದುರುಪಯೋಗದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಪೊಲೀಸರು ಸಿಐಡಿ ಬಂಧಿಸಿದೆ.
ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಖಾಸಗಿ ವಿದೇಶ ಪ್ರವಾಸಕ್ಕಾಗಿ ಸರ್ಕಾರಿ ಹಣವನ್ನು ರನಿಲ್ ವಿಕ್ರಮಸಿಂಘೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಶುಕ್ರವಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದೆ.
ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ 2023 ರ ಸೆಪ್ಟೆಂಬರ್‌ನಲ್ಲಿ ನಡೆದ ಪತ್ನಿ ಪ್ರೊಫೆಸರ್ ಮೈತ್ರಿ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ರನೀಲ್ ವಿಕ್ರಮ ಸಿಂಘೆ ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ವೈಯಕ್ತಿಕ ಉದ್ದೇಶಗಳಿಗಾಗಿ ರಾಜ್ಯದ ಸಂಪನ್ಮೂಲಗಳನ್ನು ಬಳಸಿದ್ದಕ್ಕಾಗಿ ಅವರ ಮೇಲೆ ಆರೋಪದ ಮೇಲೆ ಬಂಧಿಸಲಾಗಿದ್ದು, ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ರನಿಲ್ ವಿಕ್ರಮಸಿಂಘೆ ಅವರನ್ನು ಹಾಜರುಪಡಿಸುತ್ತಿದ್ದೇವೆ ಎಂದು ಅಧಿಕಾರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪೊಲೀಸರು ಈ ಹಿಂದೆ ಅವರ ಸಿಬ್ಬಂದಿಯನ್ನು ಪ್ರಯಾಣ ವೆಚ್ಚದ ಬಗ್ಗೆ ಪ್ರಶ್ನಿಸಿದ್ದರು. 2023 ರಲ್ಲಿ ಹವಾನಾದಲ್ಲಿ ನಡೆದ G77 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಕ್ರಮಸಿಂಘೆ ಅವರು ಲಂಡನ್‌ಗೆ ಹಿಂತಿರುಗುವಾಗ ಅಲ್ಲಿ ತಂಗಿದ್ದರು. ಯುಕೆ ರಾಜಧಾನಿಯಲ್ಲಿ ಅವರು ಮತ್ತು ಅವರ ಪತ್ನಿ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿಕ್ರಮಸಿಂಘೆ ಅವರು ತಮ್ಮ ಪತ್ನಿಯ ಪ್ರಯಾಣ ವೆಚ್ಚವನ್ನು ಅವರೇ ಭರಿಸುತ್ತಿದ್ದರು. ಯಾವುದೇ ರಾಜ್ಯ ನಿಧಿಯನ್ನು ಬಳಸಲಾಗಿಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ವಿಕ್ರಮಸಿಂಘೆ ಅವರು ಖಾಸಗಿ ಭೇಟಿಗಾಗಿ ಸರ್ಕಾರಿ ಹಣವನ್ನು ಬಳಸಿಕೊಂಡಿದ್ದಾರೆ. ಅವರ ಅಂಗರಕ್ಷಕರಿಗೂ ರಾಜ್ಯದಿಂದ ವೇತನ ನೀಡಲಾಗಿದೆ ಎಂದು ಸಿಐಡಿ ಆರೋಪಿಸಿದೆ.



