ಡೇಟಿಂಗ್ ಆಪ್ ನಲ್ಲಿ ಅಮೆರಿಕನ್ ರೂಪದರ್ಶಿ ಎಂದು ಬಿಂಬಿಸಿಕೊಂಡ 23 ವರ್ಷದ ಯುವಕ ೭೦೦ ಮಹಿಳೆಯರನ್ನು ವಂಚಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನೋಂದಣಿ ಕೆಲಸ ಮಾಡುತ್ತಿದ್ದ ದೆಹಲಿಯ ಶಾಕರ್ ಪುರ್ ನಿವಾಸಿ ತುಷಾರ್ ಸಿಂಗ್ ಬಿಸ್ಟ್ 700 ಮಹಿಳೆಯರಿಗೆ ವಂಚಿಸಿದ ಭೂಪ!
ಬೆಳಿಗ್ಗೆ ಹೊತ್ತು ಜೀವನ ನಿರ್ವಹಣೆಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದ ತುಷಾರ್ ರಾತ್ರಿ ಆಗುತ್ತಿದ್ದಂತೆ ನಾನು ಅಮೆರಿಕದ ರೂಪದರ್ಶಿ ಆಗಿದ್ದು, ಭಾರತಕ್ಕೆ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದೇನೆ ಎಂದು ಡೇಟಿಂಗ್ ಆಪ್ ನಲ್ಲಿ ಪರಿಚಯಿಸಿಕೊಂಡು ಬಿಂಬಿಸಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ.
ಬಿಬಿಎ ಪದವೀಧರನಾಗಿರುವ ತುಷಾರ್ ಸಿಂಗ್ ಕಳೆದ ಮೂರು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ತಂದೆ ಚಾಲಕನಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಾಯಿ ಗೃಹಿಣಿ ಆಗಿದ್ದು, ಸೋದರಿ ಗುರ್ ಗಾಂವ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಉತ್ತಮ ಕೆಲಸ ಇದ್ದು ಜೀವನ ನಡೆಸುವ ಜವಾಬ್ದಾರಿ ಇದ್ದರೂ ತುಷಾರ್ ಕಾಮುಕನಾಗಿದ್ದ. ಮಹಿಳೆಯರಿಗೆ ಹಾತೊರೆಯುತ್ತಿದ್ದ ಈತ ಇದಕ್ಕಾಗಿ ಬಳಸಿಕೊಂಡಿದ್ದು ಡೇಟಿಂಗ್ ಆಪ್.
ಆಪ್ ಮೂಲಕ ವಿದೇಶೀ ಮೊಬೈಲ್ ಸಿಮ್ ಪಡೆದಿದ್ದ ಈತ, ಬಂಬಲ್, ಸ್ನಾಪ್ ಚಾಟ್ ನಲ್ಲಿ ತನ್ನನ್ನು ತಾನು ಅಮೆರಿಕದ ರೂಪದರ್ಶಿ ಎಂದು ನಕಲಿ ಪ್ರೊಫೈಲ್ ದಾಖಲಿಸಿದ್ದ. ಬ್ರೆಜಿಲ್ ರೂಪದರ್ಶಿಯ ವಿವರಗಳನ್ನು ಕದ್ದು, ನಕಲಿ ಫೋಟೊಗಳ ಮೂಲಕ ತನ್ನನ್ನು ರೂಪದರ್ಶಿ ಎಂದು ಬಿಂಬಿಸಿಕೊಳ್ಳುತ್ತಿದ್ದ.
18ರಿಂದ 30 ವರ್ಷದೊಳಗಿನ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಪರಿಚಯ ಮಾಡಿಕೊಂಡು ಸ್ನೇಹಿತ ವರ್ತಿಸಿ ಸಲುಗೆ ಬೆಳೆಸಿಕೊಂಡು ದೈಹಿಕ ಸಂಪರ್ಕ ಮಾಡುತ್ತಿದ್ದ. ನಂತರ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರಂತೆ ಬಿಂಬಿಸಿಕೊಂಡ ನಂತರ ಅವರ ಖಾಸಗಿ ಫೋಟೊ ಹಾಗೂ ವೀಡಿಯೋ ಸಂಗ್ರಹಿಸುತ್ತಿದ್ದ. ನಂತರ ಅವರ ಬಳಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ವಸೂಲು ಮಾಡುತ್ತಿದ್ದ. ಈ ರೀತಿ ಬಬಲ್ ಆಪ್ ನಲ್ಲಿ 500 ಹಾಗೂ ಸ್ನಾಪ್ ಚಾಟ್ ನಲ್ಲಿ 200 ಮಹಿಳೆಯರಿಗೆ ವಂಚಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
2024 ಡಿಸೆಂಬರ್ 24ರಂದು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಬಲೆಗೆ ಬಿದ್ದಿದ್ದಳು. ಆಗ ಆಕೆ ಚಾಟ್ ಮಾಡಿ ಸ್ನೇಹಿತರಾದ ನಂತರ ಭೇಟಿ ಮಾಡುವ ಬೇಡಿಕೆ ಇಟ್ಟಿದ್ದಳು. ಆದರೆ ನಾನಾ ಕಾರಣವೊಡ್ಡಿ ಆತ ಭೇಟಿಗೆ ನಿರಾಕರಿಸಿದ ನಂತರ. ಆಕೆಯ ಖಾಸಗಿ ಫೋಟೊ ಹಾಗೂ ವಿಡೀಯೊ ಕಳುಹಿಸಿ ಹಣ ನೀಡದೇ ಇದ್ದರೆ ಇದನ್ನು ಡಾರ್ಕ್ ವೆಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ. ಯುವತಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.