ದೆಹಲಿ ಮುಖ್ಯಮಂತ್ರಿ ಆಗಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 27 ವರ್ಷಗಳ ನಂತರ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಮಹಿಳೆಗೆ ಮಣೆ ಹಾಕಿದೆ.
ಶಾಲಿಮಾರ್ ಭಾಗ್ ಕ್ಷೇತ್ರದಿಂದ ಮೊದಲ ಬಾರಿ ಶಾಸಕಿ ಆಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತೆ ಆಗಿದ್ದಾರೆ.
ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ರೇಖಾ ಗುಪ್ತಾ ಅವರ ಹೆಸರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಗುರುವಾರ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರೇಖಾ ಸತತ ಎರಡನೇ ಮಹಿಳಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಲಿದ್ದಾರೆ. ಇದಕ್ಕೂ ಮುನ್ನ ಆಪ್ ಆದ್ಮಿ ಪಕ್ಷದ ಅತಿಶಿ ಮಹಿಳಾ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.
27 ವರ್ಷಗಳ ಹಿಂದೆ ಬಿಜೆಪಿಯ ಕೊನೆಯ ದೆಹಲಿ ಸಿಎಂ ಕೂಡ ಮಹಿಳೆ ಆಗಿದ್ದರು. ಸುಷ್ಮಾ ಸ್ವರಾಜ್ ನಂತರ ದೆಹಲಿ ಸಿಎಂ ಆಗಿ 1988ರಲ್ಲಿ 52 ದಿನಗಳ ಕಾಲ ಆಡಳಿತ ನಡೆಸಿದ್ದರು. ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಮೂರು ಅವಧಿ ಅಧಿಕಾರ ನಡೆಸಿದ್ದರು. ಅರವಿಂದ್ ಕೇಜ್ರಿವಾಲ್ 10 ವರ್ಷಗಳ ಕಾಲ ಆಪ್ ಸರ್ಕಾರ ನಡೆಸಿದ್ದು, ಕೊನೆಯ 2 ತಿಂಗಳ ಕಾಲ ಅತಿಶಿ ಸಿಎಂ ಆಗಿದ್ದರು.


