ಅಂಬೇಡ್ಕರ್ ಮೇಲೆ ಗೌರವ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿಯೊಳಗೆ ಕೇಂದ್ರ ಗೃಹ ಸಚಿವ ಸ್ಥಾನದಿಂದ ಅಮಿತ್ ಶಾ ಅವರನ್ನು ವಜಾಗೊಳಿಸಬೇಕು ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗಡವು ನೀಡಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೇಲೆ ಗೌರವ ಇದ್ದರೆ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸ್ಥಾನ ವಜಾಗೊಳಿಸಿ ಎಂದು ಖರ್ಗೆ ಸವಾಲು ಹಾಕಿದ್ದಾರೆ.
ಬುಧವಾರ ಲೋಕಸಭೆ ಮುಂದೆ ಅಮಿತ್ ಶಾ ಮುಂದೆ ಪ್ರತಿಭಟನೆ ನಡೆಸಿದ ನಂತರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಹಾಗೂ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಜನರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಒತ್ತಾಯ. ಅವರಿಗೆ ಸಂವಿಧಾನಬದ್ಧ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಪ್ರಧಾನಿ ಮೋದಿಗೆ ಅಂಬೇಡ್ಕರ್ ಮೇಲೆ ಗೌರವ ಇರುವುದು ನಿಜವಾದರೆ ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ಖರ್ಗೆ ಒತ್ತಾಯಿಸಿದರು.
ಬಿಜೆಪಿಗೆ ಸಂವಿಧಾನಕ್ಕಿಂತ ಮನುಸ್ಮೃತಿ ಮೇಲೆ ಹೆಚ್ಚು ಒಲವು ಇದೆ. ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರಧಾನಿ 6 ಟ್ವೀಟ್ ಮಾಡಿದ್ದಾರೆ. ಇದರ ಅವಶ್ಯಕತೆ ಇತ್ತಾ? ಅಂಬೇಡ್ಕರ್ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅವರಿಬ್ಬರು ಸ್ನೇಹಿತರಾಗಿರುವುದರಿಂದ ಒಬ್ಬರನ್ನು ಒಬ್ಬರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಲ್ಲಿಕಾರ್ಜನ ಖರ್ಗೆ ವಿವರಿಸಿದರು.
ಅಂಬೇಡ್ಕರ್ ದಲಿತ ಹಾಗೂ ಆರ್ಥಿಕ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅವರು ಮಹಾನ್ ಮಾನವತಾವದಿ ಆಗಿದ್ದು, ಜಾತಿಯ ಬಗ್ಗೆ ಎಂದೂ ಪ್ರಸ್ತಾಪಿಸಿರಲಿಲ್ಲ. ಸಮಾನತೆಯನ್ನು ಅವರು ಪ್ರತಿಪಾದಿಸಿದರೆ ಹೊರತು ಒಂದು ಜಾತಿಯ ಪರ ನಿಂತಿರಲಿಲ್ಲ ಎಂದು ಅವರು ಹೇಳಿದರು.