ವಿಶ್ವದ ಅತ್ಯಂತ ದುಬಾರಿ ನಾಗರಿಕ ಭೂ ಚಿತ್ರಣ ಉಪಗ್ರಹ NISAR (NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ ಸ್ಯಾಟಲೈಟ್) ಬುಧವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ಭಾರತೀಯ ಬಾಹ್ಯಕಾಶ ಸಂಸ್ಥೆ ಹೊಸ ಮೈಲುಗಲ್ಲು ಸಾಧಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಸಂಜೆ 5.40ಕ್ಕೆ ಭೂ ಚಿತ್ರಣ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ ಎಂದು ಇಸ್ರೊ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಅಮೆರಿಕಾದ ನಾಸಾ ಸಹಯೋಗದಲ್ಲಿ ಸಿದ್ಧಪಡಿಸಲಾದ ಉಪಗ್ರಹವನ್ನು ಹೊತ್ತ GSLV (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್)-F16 ರಾಕೆಟ್ ಉಡಾವಣೆಗೊಂಡಿದೆ.
“ಲಿಫ್ಟ್ ಆಫ್ (ಯಶಸ್ವಿ ಉಸಾವಣೆ). ಮತ್ತು ನಾವು ಲಿಫ್ಟ್ ಆಫ್ (ನಾವು ಯಶಸ್ವಿಯಾಗಿದ್ದೇವೆ) ಆಗಿದ್ದೇವೆ! NISAR ಆನ್‌ಬೋರ್ಡ್‌ನೊಂದಿಗೆ GSLV-F16 ಯಶಸ್ವಿಯಾಗಿ ಉಡಾವಣೆಗೊಂಡಿದೆ ಎಂದು ಇಸ್ರೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಈ ಉಡಾವಣೆಯು ಭಾರತ ಉಪಗ್ರಹ ತಂತ್ರಜ್ಞಾನದಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.
ಭೂಕಂಪನ, ಜ್ವಾಲಾಮುಖಿ ಸೇರಿದಂತೆ ಪ್ರಕೃತಿ ವಿಕೋಪಗಳ ಮೇಲೆ ಈ ಉಪಗ್ರಹ ಅಧ್ಯಯನ ನಡೆಸಲಿದೆ.


