ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೂರು ವರ್ಷದ ಮಗುವನ್ನು ತಂಂದು ಸಾಕಿ ಬೆಳೆಸಿದ ಮಹಿಳೆ ಕೊನೆಗೆ ಅದೇ ಬಾಲಕಿಯಿಂದಲೇ ಕೊಲೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ.
54 ವರ್ಷದ ರಾಜಲಕ್ಷ್ಮೀ ಕೌರ್ ಕೊಲೆಯಾದ ದುರ್ದೈವಿ. ರಾಜಲಕ್ಷ್ಮೀ 10 ವರ್ಷ ಸಾಕಿ ಬೆಳೆಸಿದ ಬಾಲಕಿಗೆ ಇದೀಗ 13 ವರ್ಷವಾಗಿದ್ದು, ಆಕೆ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಹತ್ಯೆಗೈದಿದ್ದಾಳೆ.
ಗಜಪತಿ ಜಿಲ್ಲೆಯ ಪಾರಲಕ್ಕಮುಡಿ ಗ್ರಾಮದ ಅಪಾರ್ಟ್ ಮೆಂಟ್ ನಲ್ಲಿ ರಾಜಲಕ್ಷ್ಮೀಗೆ ನಿದ್ದೆ ಮಾತ್ರೆ ನೀಡಿದ ಬಾಲಕಿ ಹಾಗೂ ಆಕೆಯ ಇಬ್ಬರು ಸ್ನೇಹಿತರು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಇಬ್ಬರು ಯುವಕರ ಜೊತೆ ಸ್ನೇಹದ ಬಗ್ಗೆ ಅಸಮಾಧಾನ ಹೊಂದಿದ್ದ ರಾಜಲಕ್ಷ್ಮೀ ಅವರಿಂದ ದೂರ ಇರುವಂತೆ ಸೂಚಿಸಿದ್ದರು. ರಾಜಲಕ್ಷ್ಮೀಯ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಯುವಕರು ಬಾಲಕಿಯರನ್ನು ಓಲೈಸಿ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ.
ರಾಜಲಕ್ಷ್ಮೀ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಸಂಬಂಧಿಕರಿಗೆ ಹೇಳಿದ ಬಾಲಕಿ ಹಾಗೂ ಆಕೆಯ ಸ್ನೇಹಿತರು ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದರಿಂದ ಕೊಲೆಯ ಸಂಚು ಬಯಲಿಗೆ ಬಾರದೇ ಮುಚ್ಚಿ ಹೋಗುವ ಹಂತದಲ್ಲಿತ್ತು.
ಎರಡು ವಾರಗಳ ನಂತರ ಬಾಲಕಿ ಆಕಸ್ಮಿಕವಾಗಿ ಭುವನೇಶ್ವರದ ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋಗಿದ್ದಳು. ಆಗ ರಾಜಲಕ್ಷ್ಮೀಯ ಸೋದರ ಮೊಬೈಲ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ಇನ್ ಸ್ಟಾಗ್ರಾಂನಲ್ಲಿ ಬಾಲಕಿ ಯುವಕರ ಜೊತೆ ಕೊಲೆ ಮಾಡುವ ರೀತಿ ಬಗ್ಗೆ ಚರ್ಚಿಸಿದ್ದು, ರಾಜಲಕ್ಷ್ಮೀ ಬಳಿ ಇದ್ದ ಒಡವೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೂಡಲೇ ಸೋದರ ಪಾರಲಕ್ಕಮುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ಸತ್ಯ ಬೆಳಕಿಗೆ ಬಂದಿದೆ.


