ಪಿಕ್ ನಿಕ್ ಗೆ ಅಂತ ಬಂದಿದ್ದ ಒಂದೇ ಕುಟುಂಬದ ತಾಯಿ ಹಾಗೂ 6 ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ತುಮಕೂರಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಭಾನುವಾರ ಸಂಭವಿಸಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಬಳಿ ಮಾರ್ಕೋನಹಳ್ಳಿ ಡ್ಯಾಂಗೆ 15 ಸದಸ್ಯರ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ಡ್ಯಾಂ ಬಳಿ ತ ಮಂದಿ ನೀರಿಗಿಳಿದ ವೇಳೆ ಜಲಾಶಯದಿಂದ ಏಕಾಏಕಿನ ನೀರು ಹರಿಸಿದ್ದರಿಂದ 7 ಮಂದಿ ಕೊಚ್ಚಿ ಹೋಗಿದ್ದಾರೆ.
7 ಜನರಲ್ಲಿ ಈಗಾಗಲೇ ಇಬ್ಬರ ಮೃತದೇಹ ಸಿಕ್ಕಿದ್ದು, ಮತ್ತೋಬ್ಬರನ್ನು ರಕ್ಷಣೆ ಮಾಡಲಾಗಿದೆ. ಆದರೆ ಇನ್ನು ನಾಲ್ವರು ನಾಪತ್ತೆಯಾಗಿದ್ದಾರೆ. ಮುಳುಗಿ ಸಾಜಿಯಾ, ಅರ್ಬಿನ್ ಮೃತಪಟ್ಟಿದ್ದು, ಕಣ್ಮರೆಯಾಗಿರುವ ತಬಾಸುಮ್, ಶಬಾನ, ಮಿಫ್ರಾ, ಮಹಿಬ್ ಗಾಗಿ ಶೋಧ ಕಾರ್ಯ ನಡೆದಿದೆ.
ತುಮಕೂರು ನಗರದ ಬಿ.ಜಿ.ಪಾಳ್ಯದ ನಿವಾಸಿಗಳಾದ ಸಾಜಿಯಾ, ಅರ್ಬಿನ್ ಮೃತರು. ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಬ್ (1) ಕಣ್ಮರೆಯಾದವರು. ಇನ್ನು ನವಾಜ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಊಟ ಮುಗಿಸಿಕೊಂಡು ಜಲಾಶಯಕ್ಕೆ ಹೋಗಿದ್ದರು. ಹಿನ್ನೀರಿನ ಕಾಲುವೆಗೆ ಇಳಿಯುತ್ತಿದ್ದಂತೆಯೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಜಲಾಶಯದಲ್ಲಿ ಏಕಾಏಕಿ ನೀರು ಬಿಟ್ಟಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಮೃತಪಟ್ಟವರೆಲ್ಲರೂ ಮಹಿಳೆ ಹಾಗೂ ಬಾಲಕಿಯರು ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ನಾಪತ್ತೆ ಆಗಿರುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



