ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯದ ಸೈಬರ್ ಕಮಾಂಡ್ ನ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಪ್ರಣವ್ ಮಹಾಂತಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಬರ್ ವಂಚನೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದ ವಿವಿಧ ಭಾಗಗಳಲ್ಲಿನ 29ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದರು.
ದಿನನಿತ್ಯ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮೊಬೈಲ್‌ಗಳನ್ನು ಹ್ಯಾಕ್ ಮಾಡಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದವು ಇದನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಕಮಾಂಡ್ ಕಳೆದ ಮೂರು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿನ 29ಕ್ಕೂ ಹೆಚ್ಚು ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು ಎಂದು ಅವರು ವಿವರಿಸಿದರು.
ಮ್ಯೂಲ್ ನೆಟ್‌ವರ್ಕ್ ಅನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡಲಾಗುತ್ತಿದೆ. ಮ್ಯೂಲ್ ಅಕೌಂಟ್‌ಗಳನ್ನು ಕಾಂಟ್ರಾಕ್ಟ್ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಯಾರಿಗೆ ಬ್ಯಾಂಕ್ ಅಕೌಂಟ್ ಬೇಕು ಅಂತಹ ವ್ಯಕ್ತಿಗಳಿಗೆ ಮ್ಯೂಲ್ ಅಕೌಂಟ್‌ಗಳನ್ನು ನೀಡಲಾಗುತ್ತಿದೆ.ಮೊದಲ ಭಾರಿಗೆ ಮ್ಯೂಲ್ ನೆಟ್‌ವರ್ಕ್‌ಗಳನ್ನು ರನ್ ಮಾಡುತ್ತಿದ್ದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಮ್ಯೂಲ್ ಅಕೌಂಟ್‌ಗಳನ್ನು ಖರೀದಿಸಿ ಸೈಬರ್ ಅಫೆಂಡರ್‌ಗಳಿಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದುವರೆಗೂ 17 ಎಫ್‌ಐಆರ್ ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಯ ವೇಳೆ 25 ಎಟಿಎಂ ಕಾರ್ಡ್‌ಗಳು, 13 ಚೆಕ್ ಪುಸ್ತಕಗಳು,12 ಮೊಬೈಲ್ ಫೋನ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಅವರು ಹೇಳಿದರು.
ಈ ಖಾತೆಗಳನ್ನು ಆನ್‌ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ವಂಚನೆಗಳಂತಹ ಅನೇಕ ಅಕ್ರಮ ಹಣಕಾಸು ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಮುಂದೆಯೂ ಸಹ ಇದೆ ರೀತಿ ದಾಳಿ ನಡೆಯಲಿದೆ ಎಂದು ಅವರು ತಿಳಿಸಿದರು.



