ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿ ಡಬ್ಲೂಪಿಎಲ್ ಟಿ-೨೦ ಟೂರ್ನಿಯಲ್ಲಿ ಎರಡನೇ ಬಾರಿ ಫೈನಲ್ ಗೆ ಲಗ್ಗೆ ಹಾಕಿದೆ.
ವಡೋದರಾದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವನ್ನು 143 ರನ್ ಗಳಿಗೆ ನಿಯಂತ್ರಿಸಿದ ಆರ್ ಸಿಬಿ 13.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರ್ ಸಿಬಿ 8 ಪಂದ್ಯಗಳಿಂದ 6 ಜಯ ಹಾಗೂ 2 ಸೋಲಿನೊಂದಿಗೆ ೧೨ ಅಂಕದೊಂದಿಗೆ ಫೈನಲ್ ನಲ್ಲಿ ಸ್ಥಾನ ಪಡೆದ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು. ೨೦೨೪ರಲ್ಲಿ ಆರ್ ಸಿಬಿ ಪ್ರಶಸ್ತಿ ಗೆದ್ದ ನಂತರ ಇದೀಗ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಸಾಧಾರಣ ಗುರಿ ಬೆಂಬತ್ತಿದ ಆರ್ ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂದಾನ ಮತ್ತು ಗ್ರೇಸ್ ಹ್ಯಾರಿಸ್ ವೈಯಕ್ತಿಕ ಅರ್ಧಶತಕ ಗಳಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 108 ರನ್ ಪೇರಿಸಿ ಗೆಲುವು ದೃಢಪಡಿಸಿದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹ್ಯಾರಿಸ್ 37 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 75 ರನ್ ಸಿಡಿಸಿ ಔಟಾದರೆ, ಸ್ಮೃತಿ ಮಂದಾನ 27 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 45 ರನ್ ಗಳಿಸಿ ಅಜೇಯರಾಗಿ ಉಳಿದರು. ಜಾರ್ಜಿಯಾ ವಾಲ್ ೧೬ ರನ್ ಬಾರಿಸಿ ಔಟಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ ನಾದಿನ್ ಡಿ ಕ್ಲಾರ್ಕ್ ಮಾರಕ ದಾಳಿಗೆ ತತ್ತರಿಸಿ 8 ವಿಕೆಟ್ ಗೆ 143 ರನ್ ಗಳಿಸಿತು.
ಯುಪಿ ವಾರಿಯರ್ಸ್ ತಂಡಕ್ಕೆ ನಾಯಕಿ ಮೆಕ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮ ಮೊದಲ ವಿಕೆಟ್ ಗೆ 74 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಮೆಗ್ ಲ್ಯಾನಿಂಗ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 41 ರನ್ ಬಾರಿಸಿ ಔಟಾದರೆ ದೀಪ್ತಿ ಶರ್ಮ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 55 ರನ್ ಗಳಿಸಿದರು.
ಈ ಹಂತದಲ್ಲಿ ನಾಟಕೀಯ ಕುಸಿತ ಅನುಭವಿಸಿದ ಯುಪಿ ದೊಡ್ಡ ಮೊತ್ತ ಗಳಿಸುವ ಅವಕಾಶ ಕಳೆದುಕೊಂಡಿತು. ನಾದಿನ್ 4 ವಿಕೆಟ್ ಪಡೆದು ಮಿಂಚಿದರು.



