ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಥಮ ಅಧ್ಯಕ್ಷ ಹಾಗೂ ನಾಡೋಜ ಎಸ್.ಆರ್. ನಾಯಕ್ ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಸ್.ಆರ್. ನಾಯಕ್ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ ಶಾಲಿನಿ ಎಸ್.ನಾಯಕ್, ಪುತ್ರ ಹಾಗೂ ಪುತ್ರಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಮೇ 19ರಂದು ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಆರ್ ಎಂವಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಗಿದ್ದು, ಸಂಜೆ 4 ಗಂಟೆಗೆ ಹೆಬ್ಬಳಾದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ನಾಡಮ್ಯಾಕೇರಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಲ್ಲಿ 1945 ಜನವರಿ 1ರಂದು ಜನಿಸಿದ್ದ ಎಸ್.ಆರ್. ನಾಯಕ್, ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಭ್ಯಾಸ ಪೂರೈಸಿದರು.
ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹಾಗೂ ಛತ್ತೀಸಘಡದ ಮುಖ್ಯ ನ್ಯಾಯಮೂರ್ತಿ ಆಗಿಯೂ ಎಸ್.ಆರ್.ನಾಯಕ್ ಸೇವೆ ಸಲ್ಲಿಸಿದ್ದರು. ಎಸ್.ಆರ್. ನಾಯಕ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.



