ಭಾರತದ ಮಾಹಿತಿಗಳನ್ನು ನೀಡುವ ಮೂಲಕ ಪಾಕಿಸ್ತಾನದ ಗುಪ್ತಚರ ಕೆಲಸ ಮಾಡುತ್ತಿದ್ದ ವ್ಲಾಗರ್, ವಿದ್ಯಾರ್ಥಿ, ಉದ್ಯಮಿ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.
ಭಾರತದ ಮಾಹಿತಿ ನೀಡುತ್ತಿದ್ದಾರೆ ಎಂದು ಯೂಟ್ಯೂಬರ್ ಮಹಿಳೆಯನ್ನು ಬಂಧಿಸಿದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿರುವವರ ಮೇಲೆ ಗಮನ ಹರಿಸಿದ ಭದ್ರತಾ ಪಡೆಗಳು 3 ರಾಜ್ಯಗಳಿಂದ 8 ಮಂದಿಯನ್ನು ಬಂಧಿಸಿದ್ದಾರೆ.
ಹರಿಯಾಣದಲ್ಲಿ ನಾಲ್ವರು, ಪಂಜಾಬ್ ನಲ್ಲಿ ಮೂವರು ಮತ್ತು ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನ ಯುವ ಸಮುದಾಯವನ್ನು ಸೆಳೆದು ಭಾರತದ ಮಾಹಿತಿಗಳನ್ನು ಪಡೆಯುತ್ತಿರುವ ಬಗ್ಗೆ ಎಚ್ಚೆತ್ತ ಪೊಲೀಸರು ಮಾಹಿತಿ ಸೋರಿಕೆ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.
ಪ್ರವಾಸಿ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಬಂಧನದ ಬೆನ್ನಲ್ಲೇ ಗಡಿ ರಾಜ್ಯಗಳ ಪೊಲೀಸರು ಹಾಗೂ ಭದ್ರತಾಪಡೆಗಳು ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಪಟಿಯಾದ ಪೊಲಿಟಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿ ದೇವೇಂದ್ರ ಸಿಂಗ್ ಧಿಲ್ಲೋನ್, ಹರಿಯಾಣದಲ್ಲಿ ಸೆಕ್ಯೂರೆಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೌಮನ್ ಲಾಹಿ, ಅರ್ಮನ್, ಉತ್ತರ ಪ್ರದೇಶದ ರಾಂಪುರದ ಉದ್ಯಮಿ ಶೆಹಜಾದ್, ಗುಜರಾತ್ ನ ಜಲಂಧರ್ ನಲ್ಲಿ ಬಂಧಿಸಲಾದ ಮೊಹಮದ್ ಮುರ್ಜಜಾ ಅಲಿ, ಮತ್ತು ಗಾಜಾಲಾ ಮತ್ತು ಯಮಿನ್ ಮೊಹಮದ್ ಅವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಬಹುತೇಕರು ನಾನಾ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಕೆಲವು ತಿಂಗಳ ಹಿಂದೆ ಭೇಟಿ ನೀಡಿದ್ದು, ಭಾರತದಲ್ಲಿನ ಮಹತ್ವದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಇವರ ವಿಚಾರಣೆ ಮುಂದುವರಿದಿದೆ.



