ದುಬೈ: ಭಾರತದ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಐಸಿಸಿ ಪುರುಷರ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಲಾಗಿದೆ. ಇದರಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.
ದೀರ್ಘಕಾಲದಿಂದ ಟಾಪ್-10ರಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡಿದ್ದ ಈ ದ್ವಯರಲ್ಲಿ, ರೋಹಿತ್ ನಂ.2 ಹಾಗೂ ಕೊಹ್ಲಿ ನಂ.4 ಸ್ಥಾನದಲ್ಲಿದ್ದರು. ಆದರೆ ಬುಧವಾರ ಬೆಳಗ್ಗೆಯೇ ಅಭಿಮಾನಿಗಳು ಗಮನಿಸಿದಂತೆ, ಇಬ್ಬರೂ ಟಾಪ್-೧೦ಯಲ್ಲಿ ಮಾತ್ರವಲ್ಲ, ಟಾಪ್-100 ಪಟ್ಟಿಯಲ್ಲಿಯೂ ಕಾಣಿಸಲೇ ಇಲ್ಲ. ಇದರಿಂದಲೇ ಇಬ್ಬರೂ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವ ಘೋಷಣೆ ಮಾಡುವರೆಂಬ ವದಂತಿಗಳು ಹರಡಿದವು.
ಕೆವಲ ಒಂದು ವಾರ ಹಿಂದಷ್ಟೇ ರೋಹಿತ್ ಮತ್ತು ಕೊಹ್ಲಿ ಸ್ಪಷ್ಟವಾಗಿ ಟಾಪ್-10ರಲ್ಲಿ ಇದ್ದರು. ಬಾಬರ್ ಆಜಂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಫಲ್ಯ ಕಂಡಿದ್ದರಿದ ರೋಹಿತ್ ನಂ.3ರಿಂದ ನಂ.2ಕ್ಕೆ ಏರಿದ್ದರು. ಆದರೆ ಏಕಾಏಕಿ ಅವರನ್ನು ಪಟ್ಟಿಯಿಂದ ತೆಗೆದುಹಾಕಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಬ್ಬರೂ ಇನ್ನೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯ ಸಾಧಿಸಿದಾಗ ಇಬ್ಬರೂ ತಂಡದ ಭಾಗವಾಗಿದ್ದರು. ಆದರೆ, ರೋಹಿತ್ ಮತ್ತು ಕೊಹ್ಲಿಯವರ ಭವಿಷ್ಯವನ್ನು ಕುರಿತ ಊಹಾಪೋಹಗಳು ಈಗಾಗಲೇ ಹೆಚ್ಚಾಗಿದ್ದವು. ಇಂಗ್ಲೆಂಡ್ ಪ್ರವಾಸದಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಯುವ ಭಾರತ ತಂಡ 2-2 ಅಂತರದ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡ ನಂತರ, ಹಿರಿಯದ್ವಯಕ್ಕೆ ಏಕದಿನ ಕ್ರಿಕೆಟ್ನಲ್ಲಿ ಇನ್ನೂ ಖಚಿತ ಸ್ಥಾನವಿದೆಯೇ ಎಂಬ ಚರ್ಚೆಗಳು ತೀವ್ರಗೊಂಡಿದ್ದವು.
ಅಕಸ್ಮಾತ್ ನಡೆದ ಈ ಬೆಳವಣಿಗೆ ಅಭಿಮಾನಿಗಳಲ್ಲಿ ಇಬ್ಬರು ಶೀಘ್ರದಲ್ಲೇ ನಿವೃತ್ತಿ ಘೋಷಿಸುವರೇ ಎಂಬ ಕುತೂಹಲವನ್ನು ಹೆಚ್ಚಿಸಿದೆ. ಪ್ರಸ್ತುತ 38 ವರ್ಷದ ರೋಹಿತ್ ಮತ್ತು 36 ವರ್ಷದ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್‌ನಲ್ಲೇ ಸಕ್ರಿಯರಾಗಿದ್ದು, 2024ರಲ್ಲಿ ಟಿ2- ಕ್ರಿಕೆಟ್ ಗೆ ಹಾಗೂ ಈ ವರ್ಷ ಆರಂಭದಲ್ಲಿ ಟೆಸ್ಟ್ ಗಳಿಗೆ ವಿದಾಯ ಹೇಳಿದ್ದರು.



