ಒಂದು ಮನೆಗೆ 4 ರಿಂದ 5 ಲಕ್ಷ ರೂಪಾಯಿಯನ್ನು ಕೊಡೋದು ರಾಜ್ಯ ಸರ್ಕಾರ. ಕೇಂದ್ರ ಕೊಡೋದು ಒಂದು ಲಕ್ಷಕ್ಕಿಂತ ಕಡಿಮೆ. ಹಣ ನಮ್ಮದು, ರಾಜ್ಯ ಸರ್ಕಾರದ್ದು. ಹೆಸರು ಮಾತ್ರ ಕೇಂದ್ರದ್ದು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ ನಂತರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರನ್ನು ಆಹ್ವಾನಿಸಿಲ್ಲ. ಕೇಂದ್ರದ ಹೆಸರು ಹಾಕಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ಸರ್ಕಾರ ಬಂದ ಬಳಿಕ 5500 ಕೋಟಿ ರೂಪಾಯಿ ಹಣವನ್ನು ಎರಡು ವರ್ಷದಲ್ಲಿ ನಾವು, ನಮ್ಮ ಕಾಂಗ್ರೆಸ್ ಸರ್ಕಾರ ಮನೆಗಳಿಗಾಗಿ ಖರ್ಚು ಮಾಡಿದ್ದೇವೆ. ನಮ್ಮ ಹಣದಲ್ಲಿ ಮಾಡಿದ ಯೋಜನೆ ಗೌರವ ಕೇಂದ್ರಕ್ಕೆ ಕೊಡಬೇಕೆ ಎಂದು ಪ್ರಶ್ನಿಸಿದರು.
ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 1458000 ಮನೆಗಳನ್ನು ಕಟ್ಟಿ ಇತಿಹಾಸ ನಿರ್ಮಿಸಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024 ರಲ್ಲಿ 36789 ಮನೆಗಳನ್ನು ಮೊದಲನೇ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದ್ದೇವೆ ಎಂದು ಅವರು ವಿವರಿಸಿದರು.
ನಾವು ನುಡಿದಂತೆ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದರು. ಹಾಕಿದ್ರಾ? ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲದರಲ್ಲೂ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚಿಸಿದೆ ಎಂದರು.
ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಬಿಜೆಪಿ ಸುಳ್ಳು ಹಂಚುತ್ತಾ ತಿರುಗುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ 2500 ಕೋಟಿ ಸಬ್ಸಿಡಿ ಪ್ರತಿ ವರ್ಷ ಕೊಡುತ್ತಿದ್ದೇವೆ. ಇದರ ಜೊತೆಗೆ ವಿಧವಾ ವೇತನ, ವೃದ್ದಾಪ್ಯ ವೇತನ ಸೇರಿ ಪ್ರತಿಯೊಂದಕ್ಕೂ ಹೇರಳವಾಗಿ ಹಣ ಬಿಡುಗಡೆ ಮಾಡುತ್ತಲೇ ಇದ್ದೇವೆ ಎಂದರು.
ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಸಂತೋಷ್ ಲಾಡ್, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.



