ಭಾರತದ ಸ್ಮೃತಿ ಮಂದಾನ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇದು ಅವರ 11ನೇ ಶತಕವಾಗಿದ್ದು, ಅತೀ ಹೆಚ್ಚು ಶತಕ ಸಿಡಿಸಿದ ಮೂರನೇ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 343 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಸ್ಮೃತಿ ಮಂದಾನ 101 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 116 ರನ್ ಪೇರಿಸಿದರು. ಮಂದಾನ 102 ಪಂದ್ಯಗಳಲ್ಲಿ ಗಳಿಸಿದ 11ನೇ ಶತಕವಾಗಿದೆ.
ಸ್ಮೃತಿ ಮಂದಾನ 11ನೇ ಶತಕ ಸಿಡಿಸಿ ಇಂಗ್ಲೆಂಡ್ ನ ತಾಮಿ ಬ್ಯುಮೊಂಟ್ ದಾಖಲೆ ಮುರಿದರು. ಮೆಗ್ ಲ್ಯಾನಿಂಗ್ (15) ಮತ್ತು ಸೂಜಿ ಬ್ಯಾಟ್ಸ್ (13) ಅತೀ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.



