Monday, May 11, 2026
Home ವಿಶೇಷ ಬುದ್ಧಿಮಾಂದ್ಯನ ಬಾಳಿಗೆ ಬೆಳಕಾದ ಕುಣಿಗಲ್ ಶಾಸಕ ಹೆಚ್.ಡಿ ರಂಗನಾಥ್

ಬುದ್ಧಿಮಾಂದ್ಯನ ಬಾಳಿಗೆ ಬೆಳಕಾದ ಕುಣಿಗಲ್ ಶಾಸಕ ಹೆಚ್.ಡಿ ರಂಗನಾಥ್

by Vahini
0 comments
kunigal mla

ಕುಣಿಗಲ್: ಸ್ವಾಧೀನವಿಲ್ಲದ ದೇಹ, ಬುದ್ಧಿಮಾಂದ್ಯ ಸ್ಥಿತಿ, ಯಾರಿಗೂ ಬೇಡವಾಗದೇ ಬೀದಿಪಾಲಾಗಿದ್ದ ವ್ಯಕ್ತಿಯ ಬಾಳಿನಲ್ಲಿ ಬೆಳಕಾಗಿ ನಿಂತಿದ್ದು ಕುಣಿಗಲ್ ತಾಲೂಕಿನ ಶಾಸಕ ಹೆಚ್.ಡಿ ರಂಗನಾಥ್. ಆಮೂಲಕ ಸ್ವಾರ್ಥ, ಅಧಿಕಾರ ದಾಹ, ಶ್ರೀಮಂತಿಕೆಯ ದರ್ಪದಿಂದ ತುಂಬಿಸುವ ಸಮಾಜದಲ್ಲಿ ಮಾನವೀಯತೆ ಇನ್ನು ಬದುಕಿದೆ ಎಂಬ ಸಂದೇಶ ಸಾರಿದ್ದಾರೆ.

ಕೆಲ ದಿನಗಳ ಹಿಂದೆ ಶಾಸಕರ ರಂಗನಾಥ್‌ ಅವರು ತಮ್ಮ ಕ್ಷೇತ್ರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಹೋಗುವಾಗ ಒಬ್ಬ ವ್ಯಕ್ತಿಯನ್ನು ಕಂಡು, ಈತನ ಬಗ್ಗೆ ಆಸ್ಪತ್ರೆ ವೈದ್ಯರ ಬಳಿ ವಿಚಾರಿಸಿದ್ದಾರೆ. ಆಗ ವೈದ್ಯರು, ಈತ ಕಳೆದ ಮೂರು ದಿನಗಳಿಂದ ಆಸ್ಪತ್ರೆ ಮುಂಭಾಗದಲ್ಲಿ ಮಲಗುತ್ತಿದ್ದು, ಸ್ನಾನ ಮಾಡಿಲ್ಲ. ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಆತ ಒಪ್ಪುತ್ತಿಲ್ಲ. ಅವರಿಗೆ ತಿಳಿಹೇಳಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

ಈತ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದ ನಿವಾಸಿ ಪ್ರಭಾಕರ್ ರೆಡ್ಡಿ. ಕಳೆದ ಹಲವಾರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಜತೆಗೆ ಆತನ ಸಬಂಧಿಕರೂ ಕೂಡ ಆತನನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಆತ ಕುಣಿಗಲ್ ಆಸ್ಪತ್ರೆ ಆವರಣದಲ್ಲಿ ಅನಾಥವಾಗಿ ಬಿದ್ದಿದ್ದರು. ತನ್ನದೇ ಮಲಮೂತ್ರ, ಮಣ್ಣು ಮೆತ್ತಿಕೊಂಡ ದೇಹ, ಅನೇಕ ದಿನಗಳಿಂದ ನೀರು ಕಾಣದೆ ದುರ್ವಾಸನೆ ಬರುತ್ತಿದ್ದ ಕಾರಣ ಯಾರೋಬ್ಬರೂ ಈತನಿಗೆ ಸಹಾಯ ಮಾಡಲು ಮುಂದಾಗಿರಲಿಲ್ಲ.

ಈ ವ್ಯಕ್ತಿಯ ಪರಿಸ್ಥಿತಿ ಕಂಡು ಮರುಗಿದ ರಂಗನಾಥ್ ಅವರು ತಕ್ಷಣವೇ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ಕರೆದು, ಆ ವ್ಯಕ್ತಿಯನ್ನು ವೀಲ್ ಚೇರ್ ಮೇಲೆ ಕೂರಿಸಿ ಆತನ ಬಟ್ಟೆಯನ್ನು ತೆಗೆದು ಸ್ವತಃ ತಾವೇ ಸ್ನಾನ ಮಾಡಿಸಿದರು. ನಂತರ ಆತನಿಗೆ ಊಟ ಕೊಡಿಸಿ, ನಂತರ ಆ ವ್ಯಕ್ತಿಯನ್ನು ರಂಗನಾಥ್ ಅವರು ನೆಲಮಂಗಲ ಬಳಿಯ ಟಿ.ಬೇಗೂರು ನಿರ್ಗತಿಕ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಕ್ಷೇತ್ರಕ್ಕೆ ಬಂದಾಗ ಆಸ್ಪತ್ರೆ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸುವುದು ರಂಗನಾಥ್ ಅವರ ವಾಡಿಕೆ. ಅಂದು ಕೂಡ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಿಸಲಾಗುತ್ತಿರುವ ತಾಯಿ, ಮಗುವಿನ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿ ಹಿಂದಿರುಗುವಾರ ಶಾಸಕ ರಂಗನಾಥ್ ಅವರು ಈ ವ್ಯಕ್ತಿಯನ್ನು ನೋಡಿ ತಮ್ಮ ವೃತ್ತಿ ಧರ್ಮ ಮೆರೆದಿದ್ದಾರೆ.

ಡಾ.ರಂಗನಾಥ್ ಅವರ ಈ ಜನಪರ ಸೇವೆ ಇದೇ ಮೊದಲಲ್ಲ. ಶಾಸಕರಾದರು ಅಗತ್ಯ ಸಂದರ್ಭ ಬಂದಾಗ ಕೈ ಗವಸು ತೊಟ್ಟು ವೈದ್ಯರಾಗಿ, ಉಚಿತ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಇದುವರೆಗು ಯಶಸ್ವಿಯಾಗಿ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕುಣಿಗಲ್ ನಗರದ ನಿವಾಸಿ ಗಂಗಾ ಹನುಮಯ್ಯ ಅವರು ತಮ್ಮ ಎಡಗೈಗೆ ಶಸ್ತ್ರ ಚಿಕಿತ್ಸೆ, ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯೊಬ್ಬರಿಗೆ ಸೊಂಟದ ಶಸ್ತ್ರಚಿಕಿತ್ಸೆ, 2023 ರ ಜುಲೈನಲ್ಲಿತಮ್ಮ ಕ್ಷೇತ್ರದ ರೈತರೊಬ್ಬರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಪ್ರಕರಣದ ಬಗ್ಗೆ ಮಾತನಾಡಿದ ರಂಗನಾಥ್, ಮೂಲತಃ ವೈದ್ಯನಾದ ನಾನು ಆ ವ್ಯಕ್ತಿಯನ್ನು ಕಂಡಾಗ ಒಬ್ಬ ಮನುಷ್ಯನಾಗಿ ಮಾನವೀಯತೆಯಿಂದ ಆತನಿಗೆ ನೆರವಾಗಿದ್ದೇನೆ. ಆತನಿಗೆ ನೆರವಾಗುವಾಗ ನಾನು ಶಾಸಕ ಎಂಬ ಭಾವನೆ ನನ್ನಲ್ಲಿ ಇರಲಿಲ್ಲ. ವೈದ್ಯ ಸೇವೆಯಲ್ಲಿದ್ದಾಗ ಅನೇಕ ವೃದ್ಧರ ಶಸ್ತ್ರ ಚಿಕಿತ್ಸೆ ಮಾಡುವಾಗ ಅವರು ಅಲ್ಲೇ ಮಲಮೂತ್ರ ಮಾಡಿಕೊಳ್ಳುತ್ತಾರೆ. ಆಗ ನಾನು ಶಸ್ತ್ರಚಿಕಿತ್ಸೆ ನಿಲ್ಲಿಸಲು ಆಗುವುದಿಲ್ಲ. ಅದನ್ನು ಸ್ವಚ್ಛಗೊಳಿಸಿ ಶಸ್ತ್ರಚಿಕಿತ್ಸೆ ಮುಂದುವರಿಸಬೇಕು. ಅದೇ ರೀತಿ ನಾನು ಈ ವ್ಯಕ್ತಿಯನ್ನು ಸ್ವಚ್ಛಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ನಿರ್ಗತಿಕ ವ್ಯಕ್ತಿ ತುರುವೇಕೆರೆಯವನು. ಅಲ್ಲಿನವರು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿಚಾರವಾಗಿ ನನ್ನನ್ನು ವಿರೋಧ ಮಾಡುತ್ತಿದ್ದಾರೆ. ಆದರೆ ನಾನು ಅದೇ ಊರಿನ ವ್ಯಕ್ತಿಯನ್ನು ಕಾಕತಾಳೀಯವೆಂಬಂತೆ ಕಾಪಾಡಿದ್ದೇನೆ. ಸಾರ್ವಜನಿಕರು ಇಂತಹ ಅನಾರೋಗ್ಯಕರ ವ್ಯಕ್ತಿಗಳನ್ನು ಕಂಡರೆ ಕೂಡಲೇ 108 ಅಥವಾ 112 ಸಹಾಯವಾಣಿಗೆ ಕರೆ ಮಾಡಬೇಕು ಎಂದು ಕರೆ ನೀಡದ್ದಾರೆ.

ರಾಜ್ಯದ ಒಂದೊಂದು ತಾಲ್ಲೂಕಿನಲ್ಲಿ ಈ ರೀತಿಯ 4 ರಿಂದ 5 ವ್ಯಕ್ತಿಗಳು ಸಿಗಬಹುದು. ನನ್ನ ಅಂದಾಜಿನ ಪ್ರಕಾರ ಈ ರೀತಿಯ ಐದು ಸಾವಿರ ನಿರ್ಗತಿಕರು ದೊರೆಯಬಹುದು. ಇವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಕೊರೋನಾ ಸಮಯದಲ್ಲಿ ನಾವು ಸುಮಾರು 50 ಸಾವಿರ ಸ್ಯಾನಿಟೈಜರ್ ಹಂಚಿದ್ದೆವು, 30 ಲಕ್ಷ ಮಾತ್ರೆಗಳನ್ನು ಹಂಚಿದ್ದೆವು. ಜನಪ್ರತಿನಿಧಿಯಾದ ನನ್ನ ಕೆಲಸ ಜನರ ಕಷ್ಟಗಳಿಗೆ ಹೆಗಲಾಗುವುದು ಮಾತ್ರ ಎಂದು ಹೇಳಿದ್ದಾರೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign