ಬಾಂಗ್ಲಾದೇಶದಲ್ಲಿ ಜುಲೈ 24ರಂದು ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಗೆ ಪಾಲ್ಗೊಳ್ಳಲು ಭಾರತ ಮತ್ತು ಶ್ರೀಲಂಕಾ ನಿರಾಕರಿಸಿದೆ. ಇದರಿಂದ ಮುಂಬರುವ ಏಷ್ಯಾಕಪ್ ಟೂರ್ನಿ ನಡೆಯುವುದು ಅನುಮಾನವಾಗಿದೆ.
ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆ ಹಾಗೂ ಅಲ್ಲಿನ ಅಸ್ಥಿರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಢಾಕಾದಲ್ಲಿ ನಡೆಯಲಿರುವ ಸಭೆಯಿಂದ ಹೊರಗುಳಿಯಲು ನಿರ್ಧರಿಸಿವೆ.
ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಸಭೆ ನಿಗದಿತ ಸಮಯದಲ್ಲಿಯೇ ನಡೆಯಲಿದೆ. 15 ದಿನದ ಮುಂಚಿತವಾಗಿಯೇ ಸಭೆಯ ಮಾಹಿತಿ ಎಲ್ಲರಿಗೂ ನೀಡಲಾಗಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಆಗದೇ ಇದ್ದರೆ ಆನ್ ಲೈನ್ ನಲ್ಲಿ ಕೂಡ ಪಾಲ್ಗೊಳ್ಳಬಹುದು ಎಂದು ಪಾಕಿಸ್ತಾನದ ಎಸಿಸಿ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಜುಲೈ 20ರಿಂದ 24ರವರೆಗೆ ಟಿ-20 ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಇದೇ ವೇಳೆ ಸಭೆ ಆಯೋಜಿಸಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.


