ಮೊದಲ ಬಾರಿಗೆ ಐಪಿಎಲ್ ಟಿ-20 ಚಾಂಪಿಯನ್ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಮೂವರು ಆಟಗಾರರನ್ನು ಬಿಟ್ಟುಕೊಡಲು ಮುಂದಾಗಿದೆ.
ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆಗೆ ಆಟಗಾರರನ್ನು ಬಿಟ್ಟುಕೊಡಬೇಕಿದೆ. ಇಲ್ಲವೇ ಆಟಗಾರರನ್ನು ಅದಲು ಬದಲು ಮಾಡಿಕೊಳ್ಳಲು ಅವಕಾಶವಿದೆ.
ಆರ್ ಸಿಬಿ ಲಿಯಾಮ್ ಲಿವಿಂಗ್ ಸ್ಟೋನ್, ಲುಂಗಿ ನಿಗ್ಡಿ ಮತ್ತು ಸ್ವಪ್ನಿಲ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಆರ್ ಸಿಬಿ ಬಳಿ 75 ಲಕ್ಷ ರೂ. ಮಾತ್ರ ಜೇಬಿನಲ್ಲಿದೆ. ಮೂವರು ಆಟಗಾರರನ್ನು ಬಿಡುಗಡೆ ಮಾಡಿದರೆ ಹೆಚ್ಚುವರಿ 10.5 ಕೋಟಿ ರೂ. ಉಳಿದುಕೊಳ್ಳಲಿದೆ. ಇದರಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ನಿಗ್ಡಿ ಇಬ್ಬರ ಮೊತ್ತವೇ 10 ಕೋಟಿ ರೂ. ಉಳಿಯಲಿದೆ. ಸ್ವಪ್ನಿಲ್ ದು 50 ಲಕ್ಷ ರೂ. ಉಳಿಯಲಿದೆ.
ಈ ಮೂವರು ಆಟಗಾರರಿಂದ ಉಳಿದ ಹಣದಿಂದ ದೊಡ್ಡ ಮೊತ್ತ ನೀಡಿ ಆಟಗಾರರನ್ನು ಖರೀದಿಸಬಹುದು ಎಂದು ಆರ್ ಸಿಬಿ ತಂಡದ ಚಿಂತನೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ನಾಯಕ ರಜತ್ ಪಟಿದಾರ್, ಫಿಲ್ ಸಾಲ್ಟ್, ದೇವದತ್ ಪಡಿಕಲ್, ಟಿಮ್ ಡೇವಿಡ್, ಜಿತೇಶ್ ಕುಮಾರ್ ಮುಂತಾದ ಆಟಗಾರರು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ ನಲ್ಲಿ ಇರುವವರೆಗೂ ಆರ್ ಸಿಬಿ ತಂಡದ ಪರ ಆಡುವುದಾಗಿ ಘೋಷಿಸಿರುವುದರಿಂದ ತಂಡದಲ್ಲಿ ಮುಂದುವರಿಯಲಿದ್ದಾರೆ.
18ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಆರ್ ಸಿಬಿ ತಂಡ ಆಟಗಾರರ ಮೇಲೆ ಭರವಸೆ ಉಳಿಸಿಕೊಂಡಿದ್ದು, ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದೆ.


