ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ ರೋಚಕ ಜಯ ಸಾಧಿಸುತ್ತಿದ್ದಂತೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಹಾಜ್ಲೆವುಡ್ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹ್ಯಾಟ್ರಕ್ ಸೋಲು ಕಂಡಿದ್ದ ಆರ್ ಸಿಬಿ ತವರಿನಲ್ಲಿ ಮೊದಲ ಜಯ ದಾಖಲಿಸುತ್ತಿದ್ದಂತೆ ತಂಡದ ಇಬ್ಬರು ಗರಿಷ್ಠ ಸಾಧನೆ ತೋರಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿರುವುದು ವಿಶೇಷ. ಈ ಗೆಲುವಿನೊಂದಿಗೆ ಆರ್ ಸಿಬಿ ಕೂಡ ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಅಗ್ರ 5ರಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ ಮತ್ತು ಹಾಜ್ಲೆವುಡ್ ರಾಜಸ್ಥಾನ್ ವಿರುದ್ಧ ಅಮೋಘ ಪ್ರದರ್ಶನ ನೀಡುವ ಮೂಲಕ ಟೂರ್ನಿಯ ಅತೀ ಹೆಚ್ಚು ರನ್ ಸರದಾರರಿಗೆ ನೀಡುವ ಆರೆಂಜ್ ಕ್ಯಾಪ್ ಮತ್ತು ಅತೀ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ರೇಸ್ ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ 70 ರನ್ ಸಿಡಿಸುವ ಮೂಲಕ ಬೆಂಗಳೂರಿನಲ್ಲಿ ಪ್ರಸಕ್ತ ಸಾಲಿನ ಮೊದಲ ಅರ್ಧಶತಕ ಹಾಗೂ ಒಟ್ಟಾರೆ 4ನೇ ಅರ್ಧಶತಕ ದಾಖಲಿಸಿದರು. ಈ ಮೂಲಕ ಕೊಹ್ಲಿ 9 ಪಂದ್ಯಗಳಿಂದ 65.33ರ ಸರಾಸರಿಯಲ್ಲಿ 392 ರನ್ ಬಾರಿಸಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ 8 ಪಂದ್ಯಗಳಿಂದ 417 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಿಕೊಲಸ್ ಪೂರನ್ 9 ಪಂದ್ಯಗಳಲ್ಲಿ 377 ರನ್ ಪೇರಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ (373 ರನ್) ನಾಲ್ಕನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡದ ಜೋಸ್ ಬಟ್ಲರ್ 356 ರನ್ ನೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ 7 ಪಂದ್ಯಗಳಿಂದ 323 ರನ್ ಗಳಿಸಿ 9ನೇ ಸ್ಥಾನ ಪಡೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೋಸ್ ಹಾಜ್ಲೆವುಡ್ 16 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡುತ್ತಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದರೂ ಸರಾಸರಿಯಲ್ಲಿ ಹಿಂದೆ ಬಿದ್ದು 2ನೇ ಸ್ಥಾನದಲ್ಲಿದ್ದಾರೆ.
ಪ್ರಸಿದ್ಧ ಕೃಷ್ಣ 8 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರೆ, ಹಾಜ್ಲೆವುಡ್ 9 ಪಂದ್ಯಗಳಿಂದ 16 ವಿಕೆಟ್ ಪಡೆದು 2ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ ಹಾಜ್ಲೆವುಡ್ ಈ ಸಾಧನೆ ಮಾಡಿದ್ದಾರೆ. ಆರ್ ಸಿಬಿ ತಂಡದ ಸ್ಪಿನ್ನರ್ ಕೃನಾಲ್ ಪಾಂಡ್ಯ 2 ವಿಕೆಟ್ ಪಡೆದು ಒಟ್ಟಾರೆ ವಿಕೆಟ್ ಸಂಖ್ಯೆ 12ಕ್ಕೆ ಏರಿಸಿಕೊಂಡು 7ನೇ ಸ್ಥಾನದಲ್ಲಿದ್ದಾರೆ.