ಐಪಿಎಲ್ ಟಿ-20 ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದ್ದು, ನಾಯಕ ಸಂಜು ಸ್ಯಾಮ್ಸನ್ ಕೇವಲ ಬ್ಯಾಟ್ಸ್ ಮನ್ ಮತ್ತು ವಿಕೆಟ್ ಕೀಪರ್ ಆಗಿ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂಜು ಸ್ಯಾಮ್ಸನ್ ತಂಡವನ್ನು ಸೇರಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಆದರೆ ಆರಂಭಿಕ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನವಾಗಿದೆ. ಒಂದು ವೇಳೆ ಕಣಕ್ಕಿಳಿದರೂ ಕೇವಲ ಆಟಗಾರನಾಗಿ ಆಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಐಪಿಎಲ್ ಟಿ-20 ಟೂರ್ನಿ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ನಾಯಕನ ಘೋಷಣೆ ಮಾಡಿವೆ. ಆದರೆ ರಾಜಸ್ಥಾನ್ ರಾಯಲ್ಸ್ ದಿಢೀರನೆ ಆರಂಭಿಕ ಮೂರು ಪಂದ್ಯಗಳಿಗೆ ರಿಯಾನ್ ಪರಾಗ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿ ಅಚ್ಚರಿ ಮೂಡಿಸಿದೆ.
ಸ್ಯಾಮ್ಸನ್ ಚೇತರಿಸಿಕೊಂಡಿದ್ದರೂ ಫೀಲ್ಡರ್ ಅಥವಾ ವಿಕೆಟ್ ಕೀಪಿಂಗ್ ನಲ್ಲಿ ಆಡುವ ಬಗ್ಗೆ ವೈದ್ಯರು ಅನುಮತಿ ನೀಡಿಲ್ಲ. ಆದ್ದರಿಂದ ಸಂಜು ಕೇವಲ ಬ್ಯಾಟ್ಸ್ ಮನ್ ಆಗಿ ಆಡಲಿದ್ದು, ಯಾವುದೇ ಪಂದ್ಯದಿಂದ ಹೊರಗುಳಿಯುವುದಿಲ್ಲ ಎಂದು ತಂಡ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಸಂಜು ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರನ್ನು ತಂಡದಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ. ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್ ಗೆ ಅನುಮತಿ ದೊರೆಯುವವರೆಗೂ ಅವರು ಆಟಗಾರನಾಗಿ ತಂಡದಲ್ಲಿ ಮುಂದುವರಿಯಲಿದ್ದಾರೆ. ಯಾವುದೇ ಪಂದ್ಯದಿಂದ ಅವರನ್ನು ಹೊರಗೆ ಇಡಲಾಗುವುದಿಲ್ಲ ಎಂದು ತಂಡ ವಿವರಿಸಿದೆ.
ಮೊದಲ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ತವರಿನಲ್ಲಿ ಆಡಲಿವೆ. ಮಾರ್ಚ್ 26 ಮತ್ತು 30ರಂದು ಜೈಪುರದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದು, ಎರಡು ಪ್ರಮುಖ ಪಂದ್ಯಗಳಾಗಿವೆ.