ನಾಯಕನಾಗಿ ಗಿಲ್ ಮತ್ತೊಂದು ಶತಕ: 148 ವರ್ಷಗಳ ಇತಿಹಾಸದಲ್ಲೇ ಈ ದಾಖಲೆ ಮಾಡಿದ ಮೊದಲಿಗ
ಭಾರತ ತಂಡದ ನಾಯಕನಾದ ಬೆನ್ನಲ್ಲೇ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು ಒಂದೂವರೆ ಶತಕ ಸಿಡಿಸಿ 148 ವರ್ಷಗಳ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆಯನ್ನು ಬರೆದಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ್ದ ಶುಭಮನ್ ಗಿಲ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಶತಕ ಸಿಡಿಸಿದ್ದಾರೆ. ಗಿಲ್ 162 ಎಸೆತಗಳಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 161 ರನ್ ಗಳಿಸಿ ಮತ್ತೊಂದು ದ್ವಿಶತಕದಿಂದ ವಂಚಿತರಾದರು.
ಗಿಲ್ ಮೊದಲ ಇನಿಂಗ್ಸ್ ನಲ್ಲಿ 250ಕ್ಕಿಂತ ಅಧಿಕ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 150ಕ್ಕಿಂತ ಅಧಿಕ ರನ್ ಬಾರಿಸಿದ ಮೊದಲಿಗ ಎನಿಸಿಕೊಂಡರು.
ಗಿಲ್ ಎರಡೂ ಇನಿಂಗ್ಸ್ ಗಳಲ್ಲಿ 150ಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ 2ನೇ ನಾಯಕ ಎಂಬ ದಾಖಲೆಗೆ ಪಾತ್ರರಾದರು. 1980ರಲ್ಲಿ ಆಸ್ಟ್ರೇಲಿಯಾದ ಅಲಾನ್ ಬಾರ್ಡರ್ ನಂತರ ಗಿಲ್ ಈ ಸಾಧನೆ ಮಾಡಿದ್ದಾರೆ.
ಗಿಲ್ ಒಂದೇ ಪಂದ್ಯದಲ್ಲಿ 400ಕ್ಕಿಂತ ಅಧಿಕ ರನ್ ಗಳಿಸಿದ ವಿಶ್ವದ 5ನೇ ಬ್ಯಾಟ್ಸ್ ಮನ್ ಆಗಿದ್ದಾರೆ. 2014ರಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ನಂತರ ಗಿಲ್ ಈ ಸಾಧನೆ ಮಾಡಿದ್ದಾರೆ.
ಗಿಲ್ ನಾಯಕನಾಗಿ ಆಡಿದ 2 ಟೆಸ್ಟ್ ಗಳಲ್ಲಿ 500ಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಈ ಮೂಲಕ 57 ವರ್ಷಗಳ ಹಿಂದೆ ಅಂದರೆ 1971ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸುನೀಲ್ ಗವಾಸ್ಕರ್ 4 ಟೆಸ್ಟ್ ಗಳಲ್ಲಿ 344 ರನ್ ಗಳಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ವಿಶೇಷ ಅಂದರೆ ಡಾನ್ ಬ್ರಾಡ್ಮನ್ 974 ರನ್ ಗಳಿಸಿರುವ ಸಾರ್ವಕಾಲಿಕ ದಾಖಲೆಯ ಮುರಿಯುವ ಅಪೂರ್ವ ಅವಕಾಶ ಹೊಂದಿದ್ದಾರೆ.
ಗಿಲ್ ಒಂದೇ ಪಂದ್ಯದಲ್ಲಿ 300ಕ್ಕಿಂತ ಅಧಿಕ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ (ಶ್ರೀಲಂಕಾ ವಿರದ್ಧ 293 ಮತ್ತು 50) ದಾಖಲೆಯನ್ನು ಹಿಂದಿಕ್ಕಿದರು.


