ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಕೋಟಿ ಮೌಲ್ಯದ ನಗ ನಾಣ್ಯ ದೋಚಿದ್ದ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 78.50 ಲಕ್ಷ ರೂ. ಮೌಲ್ಯದ 1.85 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡೆಲಿವರಿ ಎಕ್ಸಿಕ್ಯೂಟಿವ್ ಸೋಗಿನಲ್ಲಿ ಸುತ್ತಾಡಿ ಮನೆಯಲ್ಲಿ ಯಾರೂ ಇಲ್ಲದ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ರಘು, ಮಿಥುನ್ ಹಾಗೂ ಜೈದೀಪ್ ಅವರನ್ನು ಬಂಧಿಸಲಾಗಿದೆ.
ಜುಲೈ 20ರಂದು ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೋರೇಟರ್ ಟಿ.ಎಸ್. ವಸಂತ್ ಕುಮಾರ್ ಭವಾನಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು1.03 ಕೋಟಿ ಮೌಲ್ಯದ ಚಿನ್ನಾಭರಣ, ರೋಲೆಕ್ಸ್ ವಾಚ್, ನಗದು ದೋಚಿದ್ದರು.
ಜುಲೈ 20ರಂದು ಸಂಜೆ 4:30ಕ್ಕೆ ಮಗನನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ವಸಂತ್ ಕುಮಾರ್ ತೆರಳಿದ್ದರು. ಆದರೆ ರಾತ್ರಿ 8 ಗಂಟೆಗೆ ವಾಪಸ್ ಬಂದು ನೋಡಿದಾಗ ದರೋಡೆ ಆಗಿದ್ದು ಗಮನಕ್ಕೆ ಬಂದಿದ್ದು, ದುಷ್ಕರ್ಮಿಗಳು ಕೇವಲ ಮೂರುವರೆ ಗಂಟೆಯೊಳಗೆ ಮನೆಯ ಲಾಕ್ ಒಡೆದು 1.03 ಕೋಟಿ ಮೌಲ್ಯದ ಚಿನ್ನಾಭರಣ, ರೋಲೆಕ್ಸ್ ವಾಚ್, ನಗದು ದೋಚಿದ್ದರು.
ಪ್ರಕರಣ ದಾಖಲಿಸಿಕೊಂಡ ಜಯನಗರ ಠಾಣೆ ಪೊಲೀಸರು, ತುರಹಳ್ಳಿ ಅರಣ್ಯ ವಲಯದಲ್ಲಿದ್ದ ಆರೋಪಿಗಳನ್ನು ಚಿನ್ನಾಭರಣಗಳ ಸಮೇತ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು. ಆರೋಪಿಗಳು ಸ್ಕೂಟಿ ಮೇಲೆ ಬಂದು ಮನೆಯೊಳಗೆ ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.



