ಕೆಆರ್ ಎಸ್ ಜಲಾಶಯದ ಕಾವೇರಿ ನದಿ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮೈಸೂರಿನಲ್ಲಿ ಭಾನುವಾರ ಸಂಭವಿಸಿದೆ.
ಮಂಡ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಹಾವೇರಿಯ ಕೃಷ್ಣ (21), ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಗ್ರಾಮದ ಸಿದ್ದೇಶ್ (22) ಮತ್ತು ಮೈಸೂರಿನ ಪಿರಿಯಾಪಟ್ಟಣದ ಪ್ರಶಾಂತ್ (21) ಮೃತಪಟ್ಟಿದ್ದಾರೆ.
ಭಾನುವಾರ ರಜೆ ಇದ್ದಿದ್ದರಿಂದ ವಿವಿಧ ಜಿಲ್ಲೆಗಳ ನರ್ಸಿಂಗ್ ಕಾಲೇಜಿನ ೬ ಮಂದಿ ವಿದ್ಯಾರ್ಥಿಗಳು ಬೈಕ್ ನಲ್ಲಿ ಮೀನಾಕ್ಷಿಪುರ ಗ್ರಾಮದ ಕಾವೇರಿ ಹಿನ್ನೀರಿನಲ್ಲಿ ಮೋಜು ಮಾಡಲು ತೆರಳಿದ್ದಾರೆ. ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಸಿದ್ದೇಶ್, ಪ್ರಶಾಂತ್ ಮತ್ತು ಕೃಷ್ಣ ನೀರಿಗಿಳಿದಿದ್ದು, ಸೆಳೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದರು.
ವಿದ್ಯಾರ್ಥಿಗಳು ಮುಳುಗುವಾಗ ಅಲ್ಲೇ ಇದ್ದ ಸ್ನೇಹಿತರು ಕೂಗಾಡಿದ್ದನ್ನು ಕೇಳಿಸಿಕೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಇಲವಾಲ ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶವಗಳನ್ನು ಹೊರತೆಗೆದಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



