ಗದಗ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನಾಭರಣಗಳು ತುಂಬಿದ ತಂಬಿಗೆಯಲ್ಲಿ ನಿಧಿ ಪತ್ತೆ ಆಗಿದ್ದು, ಬಡ ಕುಟುಂಬ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಮನೆಯಲ್ಲಿ ಅಡಿಪಾಯ ತಗೆಯುವಾಗ ನಿಧಿ ಸಿಕ್ಕಿದೆ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ದೊರೆತಿದ್ದು, ಸ್ಥಳಕ್ಕೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
1 ಹಿತ್ತಾಳೆ ತಂಬಿಗೆ, 2 ಸರ, 18 ಬಿಲ್ಲೆಗಳು, ಕಾಲ್ಗೆಜ್ಜೆ, ಕಡ ಇತ್ಯಾದಿ ವಡವೆಗಳು ಪತ್ತೆಯಾಗಿವೆ. ಸ್ಥಳಕ್ಕೆ ಎಸ್.ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ಪುರಾತತ್ವ ಇಲಾಖೆ ಸಿಬ್ಬಂದಿಗಳು, ಲಕ್ಕುಂಡಿ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊರೆತ ಚಿನ್ನಾಭರಣಗಳು ಯಾರ ಕಾಲದ್ದು, ಎಷ್ಟು ಮೌಲ್ಯದು ಎಂದು ತನಿಖೆ ಆರಂಭಿಸಿದ್ದಾರೆ.
ಚಿನ್ನಾಭರಣಗಳು ಯಾವ ಕಾಲದ್ದು ಎಂದು ತನಿಖೆ ನಂತರವೆ ತಿಳಿಯಲಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸ್ಯದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಬಡತನದಲ್ಲಿದ್ದರೂ ಸಿಕ್ಕಿದ ನಿಧಿಯನ್ನು ಪ್ರಾಮಾಣಿಕವಾಗಿ ಜಿಲ್ಲಾಧಿಕಾರಿಗೆ ಒಪ್ಪಿಸಿದ ಕುಟುಂಬ ಮಾದರಿಯಾಗಿದ್ದು, ಜಿಲ್ಲಾಧಿಕಾರಿ ಬಡ ಕುಟುಂಬಕ್ಕೆ ಸೂಕ್ತ ನೆರವು ನೀಡುವ ಭರವಸೆ ನೀಡಿದ್ದಾರೆ.



