ವಾಷಿಂಗ್ಟನ್: ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ 11 ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮದೇ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಷಣ ಮಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆಗದಂತೆ ತಡೆದಿದ್ದು ನಾನು ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಯುದ್ಧ ನಿಲ್ಲಿಸದೇ ಇದ್ದರೆ ಶೇ.೨೦೦ರಷ್ಟು ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿ ಯುದ್ಧವನ್ನು ತಡೆದಿದ್ದೇನೆ ಎಂದರು.
ಅಮೆರಿಕದ ಈ ಹೇಳಿಕೆಯನ್ನು ಭಾರತ ಖಂಡಿಸುತ್ತಲೇ ಬಂದಿದೆ. ಅಲ್ಲದೇ ವಿಮಾನ ಪತನ ಸುದ್ದಿ ಅಲ್ಲಗಳೆಯದೇ ಇದ್ದರೂ ಭಾರತದ ಯಾವುದೇ ಪೈಲೆಟ್ ಗಳು ದಾಳಿ ವೇಳೆ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಎರಡು ಪರಮಾಣು ಅಣ್ವಸ್ತ್ರ ಹೊಂದಿದ ದೇಶಗಳ ನಡುವೆ ಯುದ್ಧವಾದರೆ ದೊಡ್ಡ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ನಾವು ಮಧ್ಯಪ್ರವೇಶಿಸಿ ಯುದ್ಧವನ್ನು ನಿಲ್ಲಿಸಿದೆ ಎಂದು ಟ್ರಂಪ್ ಸುಮಾರು ೬೦ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ 11 ವಿಮಾನಗಳು ಪತನಗೊಂಡಿವೆ. ಪಾಕಿಸ್ತಾನದ ಹಲವಾರು ವಿಮಾನಗಳು ಪತನಗೊಂಡಿವೆ ಎಂದು ಅವರು ಸಭೆಯಲ್ಲಿ ಹೇಳಿದರು.
ಭಾರತದ ಸೇನಾ ಮುಖ್ಯಸ್ಥರು ಈ ಹಿಂದೆ ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಿದ್ದೂ ಅಲ್ಲದೇ ಅಮೆರಿಕ ನಿರ್ಮಿತ ಎಫ್-16, ಚೀನಾದ ಜೆಎಫ್-17 ಮುಂತಾದ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದ್ದರು.



