ಧರ್ಮಸ್ಥಳದಲ್ಲಿ ಹೂತು ಹಾಕಿರುವ ಶವಗಳ ಶೋಧ ಕಾರ್ಯ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಸೋಮವಾರ ದಿಢೀರನೆ ದಟ್ಟ ಅರಣ್ಯದಲ್ಲಿ ಶೋಧ ನಡೆಸಿದ್ದರಿಂದ ತಲೆಬುರುಡೆಯ ಮೂಳೆಗಳು ಪತ್ತೆಯಾಗಿವೆ.
ಕಳೆದ 12 ವರ್ಷಗಳ ಅವಧಿಯಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ದೂರುದಾರನ ಸಲಹೆ ಮೇರೆಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಸೋಮವಾರ ಮಾನವನ ತಲೆಬುರುಡೆಯ ಮೂಳೆಯ ತುಂಡುಗಳನ್ನು ಪತ್ತೆಹಚ್ಚಿದೆ.
ಕಳೆದ ಒಂದು ವಾರದಿಂದ ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದಲ್ಲಿ ದೂರುದಾರ ನೀಡಿದ ಮಾಹಿತಿ ಅನ್ವಯ ಗುರುತಿಸಲಾದ 13 ಪಾಯಿಂಟ್ ಗಳ ಪೈಕಿ 10ರಲ್ಲಿ ಶೋಧ ಕಾರ್ಯ ಪೂರ್ಣಗೊಳಿಸಿದ ಎಸ್ ಐಟಿ ಅಧಿಕಾರಿಗಳು ಸೋಮವಾರ 11ರಿಂದ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಬೇಕಿತ್ತು.
ವಾರದ ರಜೆ ಕಾರಣ 11ರಿಂದ 13ನೇ ಪಾಯಿಂಟ್ ವರೆಗೆ ಭಾನುವಾರ ಶೋಧ ಕಾರ್ಯ ನಡೆಸದ ಎಸ್ ಐಟಿ, ಪಾಯಿಂಟ್ ಬಳಿ ಗನ್ ಮ್ಯಾನ್ ನೇಮಿಸುವ ಮೂಲಕ ಈ ಪ್ರದೇಶವನ್ನು ರಕ್ಷಿಸಿತ್ತು.
ಸೋಮವಾರ 11ರಿಂದ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಬೇಕಿದ್ದ ಎಸ್ ಐಟಿ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಿದ್ದು, ಬಂಗ್ಲಗುಡ್ಡ ಪ್ರದೇಶದ ಕಾಡಿನಲ್ಲಿ ತಲೆಬುರುಡೆಯ ಮೂಳೆಗಳು ಪತ್ತೆಯಾಗಿವೆ.



