ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಹಾಕಿದ್ದ ಇಬ್ಬರನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದ 18 ಮಂದಿಯ ವಿರುದ್ಧ ದೂರು ನೀಡಿದ್ದರು. ಆದರೆ ದೂರು ನೀಡಿ ಹಲವು ದಿನಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು.
ನಾನು ದೂರು ನೀಡಿ ಹಲವು ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಬೇರೋಬ್ಬ ಮಹಿಳೆ ದೂರು ನೀಡಿ ಒಂದೇ ದಿನದಲ್ಲಿ ಕ್ರಮ ಕೈಗೊಂಡಿದ್ದರು. ದೇಶದಲ್ಲಿ ಎಲ್ಲರೂ ಕಾನೂನು ಒಂದೇ. ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
“ಪೊಲೀಸರು ಕೇವಲ ಕೆಲವರಿಗಲ್ಲ, ಎಲ್ಲರಿಗಾಗಿಯೂ ಇದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಮಾಡಿದ್ದ ಆರೋಪಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಇದರ ಬೆನ್ನಲ್ಲೇ ಪೊಲೀಸರು ಅಶ್ಲೀಲ ಕಮೆಂಟ್ ಹಾಕಿದ್ದ ಬೆಂಗಳೂರಿನ ಚಿಕ್ಕಬಾಣಾವರದ ಆಟೊ ಚಾಲಕ ಚಂದ್ರು, ದಾವಣಗೆರೆಯ ಎಂಜಿನಿಯರ್ ನಿತಿನ್ ಎಂಬುವವರನ್ನು ಬಂಧಿಸಿದ್ದಾರೆ.
ವಿಜಯಲಕ್ಷ್ಮೀ ಅವರು ದೂರು ನೀಡಿದ ಬಳಿಕ ಆರೋಪಿಗಳಿಬ್ಬರು ಪೋಸ್ಟ್ ಗಳನ್ನು ಡಿಲೀಟ್ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಐಪಿ ಅಡ್ರೆಸ್ ಮೂಲಕ ಇವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಅರೆಸ್ಟ್ ಆಗುವ ಸಾಧ್ಯತೆ ಇದೆ.



