ಮನುಷ್ಯರಿಗೆ 2 ಬಾರಿ ಕಚ್ಚಿದ ಬೀದಿನಾಯಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಆದೇಶವನ್ನು ಉತ್ತರ ಪ್ರದೇಶದ ಸರ್ಕಾರ ಜಾರಿಗೊಳಿಸಿದೆ.
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಈ ವಿಚಿತ್ರ ಆದೇಶ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗಿದೆ.
ಮನುಷ್ಯರಿಗೆ ಮೊದಲ ಬಾರಿ ಕಚ್ಚಿದ ಬೀದಿನಾಯಿಯನ್ನು 10 ದಿನಗಳ ಕಾಲ ಪ್ರಾಣಿದಯಾ ಕಸ್ಟಡಿಯಲ್ಲಿ ಇಡಬೇಕು. ಒಂದು ವೇಳೆ ಎರಡು ಬಾರಿ ಕಚ್ಚಿದರೆ ಅಂತಹ ನಾಯಿಯನ್ನು ಜೀವ ಇರುವವರೆಗೂ ಬಂಧನದಲ್ಲಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಎರಡು ಬಾರಿ ಕಚ್ಚಿದ ನಾಯಿಯನ್ನು ಯಾರಾದರೂ ದತ್ತು ಪಡೆದು ಸಾಕಿದರೆ ಅಥವಾ ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿದಾವಿತ್ ನಲ್ಲಿ ಪ್ರಮಾಣ ಮಾಡಿದರೆ ಮಾತ್ರ ಅಂತಹ ಬೀದಿನಾಯಿಗಳನ್ನು ಬಂಧ ಮುಕ್ತಗೊಳಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾರಾದರೂ ನಾಯಿ ಕಡಿತದಿಂದ ರ್ಯಾಬಿಸ್ ರೋಗ ನಿಗ್ರಹಕ್ಕಾಗಿ ಇಂಜೆಕ್ಷನ್ ಪಡೆದಿದ್ದರೆ, ಅಂತಹ ನಾಯಿಯನ್ನು ಗುರುತಿಸಿ ತನಿಖೆ ಮಾಡಲಾಗುವುದು ಅಲ್ಲದೇ ಅಂತಹ ನಾಯಿಯನ್ನು ಸಮೀಪದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ದಾಖಲಿಸಲಾಗುವುದು ಎಂದು ತಿಳಿಸಿದೆ.
ವಶಕ್ಕೆ ಪಡೆದ ಬೀದಿನಾಯಿ ಮೇಲೆ 10 ದಿನಗಳ ಕಾಲ ನಿಗಾ ವಹಿಸಲಾಗುವುದು. ನಾಯಿಯನ್ನು ಹೊರಗೆ ಬಿಡುವಾಗ ಅದಕ್ಕೆ ಚಿಪ್ ಅಳವಡಿಸಲಾಗುವುದು. ನಂತರ ಅದರ ಚಲನವಲನಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಯುಪಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವೇಳೆ ಹೊರಗೆ ಬಿಡಲಾದ ನಾಯಿ ಯಾವುದೇ ಪ್ರಚೋದನೆ ಇಲ್ಲದೇ ಸುಮ್ಮನೆ ಮನುಷ್ಯರನ್ನು ಕಚ್ಚಿದರೆ ಅದನ್ನು ಹಿಡಿದು ಶಾಶ್ವತವಾಗಿ ಕೂಡಿ ಹಾಕಲಾಗುವುದು. ಒಂದು ವೇಳೆ ಯಾರಾದರೂ ಕಲ್ಲು ಎಸೆದು, ಹೊಡೆದು ಪ್ರಚೋದನೆ ನೀಡಿ ಕಚ್ಚಿದರೆ ಅದನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.
ಬೀದಿನಾಯಿಗಳನ್ನು ದತ್ತು ಪಡೆಯಬಹುದು ಎಂದು ಅವರು ಆದೇಶದಲ್ಲಿ ಹೇಳಲಾಗಿದೆ, ಆದರೆ ಹಾಗೆ ಮಾಡುವ ವ್ಯಕ್ತಿಯು ಹೆಸರು, ವಿಳಾಸ ಇತ್ಯಾದಿಗಳ ಎಲ್ಲಾ ವಿವರಗಳನ್ನು ಒದಗಿಸಬೇಕು ಮತ್ತು ನಾಯಿಯನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ನಾಯಿಯ ಮೈಕ್ರೋಚಿಪ್ ವಿವರಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಅದನ್ನು ಬಿಟ್ಟರೆ, ದತ್ತು ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಯಾಗ್ ರಾಜ್ ನ ಶ್ವಾನ ನಿಯಂತ್ರಣ ಘಟಕದ ಮುಖ್ಯಸ್ಥ ರಾಜ್ ತಿಳಿಸಿದ್ದಾರೆ.



