ದಾವಣಗೆರೆ: ಹಣಕಾಸು ದುರುಪಯೋಗ ಸಂಬಂಧ ಲೆಕ್ಕ ಕೇಳಿದ ವಿಷಯದಲ್ಲಿ ಟ್ರಸ್ಟಿಗಳು ಹಾಗೂ ಸ್ವಾಮೀಜಿ ನಡುವೆ ಜಟಾಪಟಿ ಉಂಟಾಗಿದ್ದು, ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿಯವರನ್ನು ಮಠದ ಟ್ರಸ್ಟಿಗಳು ಉಚ್ಚಾಟಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ಸೋಮವಾರ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಭಾಗವಹಿಸಿ ಸ್ವಾಮೀಜಿಯನ್ನು ಉಚ್ಛಾಟಿಸುವ ನಿರ್ಣಯ ಕೈಗೊಂಡರು.
ಪಂಚಮಸಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ಮಾತನಾಡಿ, ‘ಸ್ವಾಮೀಜಿಗಳನ್ನು ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸ್ವಾಮೀಜಿಗಳಿಗೆ ಶ್ವಾಸ ಪೀಠದಲ್ಲಿ ಇರಬೇಕು ಇಲ್ಲವೇ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು ಎಂದಿದ್ದೆವು. ಸ್ವಾಮೀಜಿಗಳು ಗೌರವಯುತವಾಗಿ ಮಠವನ್ನು ಬಿಡಬೇಕು ಎಂದು ಮನವಿ ಮಾಡಿದ್ದೆವು. ಮಾರ್ಚ್ 24ಕ್ಕೆ ನಿರ್ಣಯ ತೆಗೆದುಕೊಳ್ಳಲು ಅಂತಿಮ ಗಡುವು ನೀಡಿದ್ದೆವು. ಆದರೆ, ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿದ ಕಾರಣ ಅವರನ್ನು ಪೀಠದಿಂದ ತೆಗೆದುಹಾಕುವ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಈಗ ಅಕ್ಷರಶಃ ರಣರಂಗವಾಗಿದೆ. ಮಠದ ಟ್ರಸ್ಟಿಗಳಿಗೆ ‘ಲೆಕ್ಕ ಕೊಡಿ’ ಎಂದು ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ತಹಶೀಲ್ದಾರ್ ಮಠದ ಸುತ್ತಲು ನಿಷೇದಾಜ್ಞೆ ಜಾರಿ ಮಾಡಿದ್ದಾರೆ.
ಮಠದ ಒಳಗೆ ಸ್ವಾಮೀಜಿ, ಟ್ರಸ್ಟಿಗಳಿದ್ದರೆ, ಹೊರಗೆ ಪೊಲೀಸರು ಹಾಗೂ ಭಕ್ತರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಮಠದ ಒಳಗೆ ಭಕ್ತರನ್ನು ಬಿಡ್ತಿಲ್ಲ ಎಂಬ ಕಾರಣಕ್ಕೆ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇನ್ನು ಪೊಲೀಸ್ ಸರ್ಪಗಾವಲಿನಲ್ಲಿ 13 ಜನ ಟ್ರಸ್ಟಿಗಳು ಸಭೆ ಮಾಡಿ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟನೆ ಮಾಡಿರುವುದು ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದಿಂದ ಮತ್ತು ಭಕ್ತರು ಮಠಕ್ಕೆ ನೀಡಿದ ದೇಣಿಗೆಯನ್ನು ಟ್ರಸ್ಟಿಗಳು ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಲೆಕ್ಕ ಕೊಡಿ ಎಂದು ಈ ಹಿಂದೆ ಭಕ್ತರು ಪ್ರತಿಭಟನೆ ಮಾಡಿದ್ದರು.
ಮಠದಲ್ಲಿ ಬಿಗುವಿನ ವಾತಾವರಣ
ಪ್ರಧಾನ ಧರ್ಮಧರ್ಶಿ ಬಿಸಿ ಉಮಾಪತಿ, ಟ್ರಸ್ಟಿಗಳಾದ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಸೇರಿದಂತೆ ಹಲವರ ವಿರುದ್ದ ಮಠದ ಭಕ್ತರು ಲೆಕ್ಕ ಕೊಡಿ ಅಭಿಯಾನ ಶುರು ಮಾಡಿದರು. ಮಠದ ಹೊರಗೆ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಸೋಮಣ್ಣ ಬೇವಿನಮರದ, ಮಾಜಿ ಮೇಯರ್ ಅಜಯ್ ಕುಮಾರ್ ಸೇರಿದಂತೆ ನೂರಾರು ಭಕ್ತರು ಸೇರಿ ಟ್ರಸ್ಟಿಗಳೇ ಲೆಕ್ಕಕೊಡಿ ಎಂದು ಪ್ರತಿಭಟನೆ ಶುರುಮಾಡಿದರು.
ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಅಲ್ಲದೇ, ಮಠದ ಒಳಗೆ ಭಕ್ತರ ಪ್ರವೇಶ ನಿರಾಕರಿಸಲಾಗಿತ್ತು. ಭಕ್ತರನ್ನು ಒಳಗೆ ಬಿಡ್ತಿಲ್ಲ ಎಂದು ಪೊಲೀಸರು ಹಾಗೂ ಸ್ವಾಮೀಜಿ ನಡುವೆ ವಾಗ್ವಾದ ಆಯಿತು. ಈ ವೇಳೆ ಎಎಸ್ಪಿ ಪರಮೇಶ್ವರ ಹೆಗಡೆ ಅವರು ವಚನಾನಂದ ಶ್ರೀಯವರನ್ನು ಒಳಗೆ ಕಳಿಸಿದ್ರು.
ಟ್ರಸ್ಟಿಗಳು ಭಕ್ತರ ನಡುವೆ ವಾಗ್ವಾದ: ಹರಿಹರ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಛಾಟನೆ ಬೆನ್ನಲ್ಲೇ ಭಕ್ತರು ಉದ್ವಿಗ್ನ ಮಠದ ಟ್ರಸ್ಟಿಗಳು ಹೋಗುತ್ತಿದ್ದ ವಾಹನಗಳಿಗ ಚಪ್ಪಲಿ ತೋರಿಸಿದ್ರು. ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ಹೊರಹಾಕಿದ್ರು. ಲೆಕ್ಕ ಕೊಡಿ ಎಂದಿದ್ದಕ್ಕೆ ಉಚ್ಚಾಟನೆ ಮಾಡಿದ್ದಾರೆ ಅಂತ ಭಕ್ತರು ಕಿಡಿ ಕಾರಿದ್ರು. ಇದರಿಂದ ಕೆಲಕಾಲ ಪಂಚಮಸಾಲಿ ಮಠದ ಮುಂಭಾಗ ಭಾರೀ ಹೈಡ್ರಾಮವೇ ನಡೆಯಿತು. ಸದ್ಯ ಸ್ಥಳದಲ್ಲಿರುವ ಪೊಲೀಸರು ಭಕ್ತರನ್ನು ಹೊರಗೆ ಕಳಿಸಿದ್ದಾರೆ. ಇಡೀ ಮಠಕ್ಕೆ ಹಾಗೂ ಶ್ರೀಯವರಿಗೆ ಪೊಲೀಸರು ಸೆಕ್ಯುರಿಟಿ ಕೊಟ್ಟಿದ್ದಾರೆ.
ವಚನಾನಂದ ಸ್ವಾಮೀಜಿ ಹೇಳಿದ್ದೇನು? ಇಂದಿನ ಸಭೆ ಬಗ್ಗೆ ನನಗೆ ಮಾಹಿತಿ ಕೊಟ್ಟಿಲ್ಲ. ಉಚ್ಚಾಟನೆ ಮೊದಲು ನೋಟಿಸ್ ನೀಡಿಲ್ಲ. ಅಧಿಕೃತವಾಗಿ ನೋಟಿಸ್ ಕೊಡ್ಬೇಕು. ಮಠ ಎನ್ನುವುದು ಕೇವಲ 12 ಜನರಿಗೆ ಸೇರಿದ್ದಲ್ಲ. ಜನರ ಮಠ ಅಲ್ಲ. ಟ್ರಸ್ಟಿಗಳಾದವರು ನೋಟಿಸ್ ನಮ್ಮ ಕೈಗೆ ಕೊಡಬೇಕು. ಮಠದಲ್ಲಿ ಅವ್ಯವಹಾರದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು.



