ಪ್ರೀತಿಸಿದವರು ಸಿಗಲಿಲ್ಲ ಅಂತ ಮದುವೆ ಆಗಿದ್ದ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಹಳ್ಳಿ ಗ್ರಾಮದ ನಿವಾಸಿ 20 ವರ್ಷದ ಸೃಷ್ಟಿ ಹಾಗೂ 25 ವರ್ಷದ ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಪ್ರೀತಿಸಿದ ಹುಡುಗ ಸಿಗಲಿಲ್ಲ ಎಂದು ಸೃಷ್ಟಿ ಶಿಂಷಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಸಾವಿನ ಸುದ್ದಿ ತಿಳಿದ ಪ್ರಿಯತಮ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂದೂವರೆ ವರ್ಷದ ಹಿಂದೆ ಸೃಷ್ಟಿಗೆ ದಿನೇಶ್ ಎಂಬಾತನ ಜೊತೆ ಮದುವೆ ಆಗಿದ್ದರೆ, ಪ್ರಸನ್ನ ಸೃಷ್ಟಿಯ ಗೆಳತಿ ಸ್ಪಂದನಾಳನ್ನು ಮದುವೆಯಾಗಿದ್ದ. ಆದರೂ ಸಹ ಇವರಿಬ್ಬರು ಪದೇಪದೆ ಭೇಟಿ ಮಾಡುತ್ತಿದ್ದರು. ಈ ವಿಷಯ ಸೃಷ್ಟಿ ಪತಿ ದಿನೇಶ್ ಗೆ ಗೊತ್ತಾಗಿ ಮನೆಯಲ್ಲಿ ಗಲಾಟೆ ಆಗಿದೆ.
ಸೃಷ್ಟಿ ಡಿಸೆಂಬರ್ 11ರಂದು ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಆದರೆ, ಎಲ್ಲಿ ಹೋಗಿದ್ದಾಳೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿನೇಶ್ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಸನ್ನನ ಜೊತೆ ಹೋಗಿರಬಹುದು ಎಂದು ದೂರು ನೀಡಿದ್ದ.
ಡಿಸೆಂಬರ್ 16ರಂದು ಶಿಂಷಾ ನದಿಯಲ್ಲಿ ಸೃಷ್ಟಿ ಶವ ಪತ್ತೆಯಾಗಿದೆ. ಮದ್ದೂರು ಪೊಲೀಸರು ಮೃತದೇಹವನ್ನು ಗುರುತಿಸಿ ಸೃಷ್ಟಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಪ್ರಿಯತಮ ಪಸನ್ನ, ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Leave a Reply