ಮಳೆ ಪದೇಪದೆ ಅಡ್ಡಿಪಡಿಸಿದರೂ ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 3 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಸೋಲಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್ ಗೆ 155 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಮಳೆಯಿಂದ ಪದೇಪದೆ ಅಡ್ಡಿಯಾದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 15 ರನ್ ಗಳಿಸುವ ಗುರಿ ನೀಡಲಾಯಿತು. ತವಾಟಿಯಾ ಮತ್ತು ಕೊಟ್ಜಿಯಾ ತಲಾ ಒಂದು ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಆದರೆ ಕೊಟ್ಜಿಯಾ ಔಟಾಗಿದ್ದರಿಂದ ಕೊನೆಯ ಎಸೆತದಲ್ಲಿ 1 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ಒಂದು ರನ್ ಕದಿಯುವಲ್ಲಿ ಯಶಸ್ವಿಯಾಗುವ ಮೂಲಕ ಗುಜರಾತ್ ಟೈಟಾನ್ಸ್ ರೋಚಕ ಜಯದೊಂದಿಗೆ 2 ಅಂಕ ಸಂಪಾದಿಸಿತು.
ಈ ಗೆಲುವಿನೊಂದಿಗೆ ಗುಜರಾತ್ 11 ಪಂದ್ಯಗಳಿಂದ 8 ಜಯ ಹಾಗೂ 3 ಸೋಲಿನೊಂದಿಗೆ ಆರ್ ಸಿಬಿ ಜೊತೆ 16 ಅಂಕ ಪಡೆದು ಸಮಾನ ಸ್ಥಾನ ಪಡೆದರೂ ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಿ ಅಗ್ರಸ್ಥಾನ ಪಡೆಯಿತು.
ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 7 ಜಯ ಹಾಗೂ 5ನೇ ಸೋಲಿನೊಂದಿಗೆ 14 ಅಂಕದೊಂದಿಗೆ 4ನೇ ಸ್ಥಾನದಲ್ಲೇ ಉಳಿಯಿತು.



