ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಧ್ಯಮ ವೇಗಿ ಜೋಸ್ ಹಾಜ್ಲೆವುಡ್ ಗಾಯಗೊಂಡಿದ್ದು, ಐಪಿಎಲ್ ಟೂರ್ನಿಗೆ ಮರಳುವುದು ಅನುಮಾನವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಐಪಿಎಲ್ ಟೂರ್ನಿಯನ್ನು ಪುನರಾಂಭಿಸಲು ಪ್ರಯತ್ನ ನಡೆಸಿದ್ದು, ವಿದೇಶೀ ಆಟಗಾರರು ಸ್ವದೇಶಕ್ಕೆ ಮರಳಲಿದ್ದು, ಬಹುತೇಕ ತಂಡಗಳು ವಿದೇಶೀ ಆಟಗಾರರ ಸೇವೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆ ನಡುವೆ ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗಾಯದ ಕಾರಣ ಹೊರಗುಳಿದಿದ್ದ ಜೋಸ್ ಹಾಜ್ಲೆವುಡ್ ಮೇ 9ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಆಡುವುದು ಅನುಮಾನವಾಗಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಐಪಿಎಲ್ ಪಂದ್ಯಗಳು ರದ್ದಾಗಿದ್ದವು.
ಐಪಿಎಲ್ ಟೂರ್ನಿಗೂ ಮುನ್ನವೇ ಸ್ನಾಯು ಸೆಳೆತದಿಂದ ಭಾರತ- ಗವಾಸ್ಕರ್ ಟೂರ್ನಿ ಮತ್ತು ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ವೇಗಿ ಇದೀಗ ಮತ್ತೆ ಸ್ನಾಯು ಸೆಳೆತಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಮಹತ್ವದ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಆರ್ ಸಿಬಿ ತಂಡದ ನಾಯಕ ರಜತ್ ಪಟಿದಾರ್ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ಆಡಲಿದ್ದಾರೆ.
ಇದೇ ವೇಳೆ ಜೂನ್ 11ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭಗೊಳ್ಳಲಿದ್ದು, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಸ್ವದೇಶಕ್ಕೆ ಮರಳಬೇಕಿದೆ. ಅಲ್ಲದೇ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರ ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಿದೆ.



